ರಾಜ್ಯ ಸರ್ಕಾರದಿಂದ ಮಹರ್ಷಿ ವಾಲ್ಮೀಕಿಗೆ ಅವಮಾನ: ಆದಿಕವಿ ಜಯಂತಿಯನ್ನೇ ಮರೆತ ಸರ್ಕಾರ!
ಬೆಂಗಳೂರು, ಜ.02: ರಾಜ್ಯ ಸರ್ಕಾರಕ್ಕೆ ಪದೇ ಪದೆ ಪರಿಶಿಷ್ಟ ಪಂಗಡ ಸಮುದಾಯವನ್ನು ಕಂಡರೆ ಅದೇನು ತಾತ್ಸಾರವೋ ಗೊತ್ತಿಲ್ಲ, ಅವರ ವಿಚಾರದಲ್ಲಿ ಮತ್ತೆ ಮತ್ತೆ ಎಡವುತ್ತಲೇ ಇದೆ. ಈ ಬಾರಿ ಜಯಂತಿಗಳನ್ನು ಘೋಷಿಸುವ ವಿಚಾರದಲ್ಲಿ ಮತ್ತೆ ಎಡವಿದ್ದು ಮಹರ್ಷಿ ವಾಲ್ಮೀಕಿಯನ್ನೇ ಮರೆತು ಜಯಂತಿಗಳ ಪಟ್ಟಿ ಸಿದ್ದಪಡಿಸಿದೆ. ಈ ಬಗ್ಗೆ ರಾಜ್ಯದ ಹಲವೆಡೆ ವಾಲ್ಮೀಕಿ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ ಸರ್ಕಾರ ಮತ್ತೆ ಮತ್ತೆ ವಾಲ್ಮೀಕಿ ಸಮುದಾಯ ಅಥವಾ ಪರಿಶಿಷ್ಟ ವರ್ಗಗಳ ವಿಚಾರದಲ್ಲಿ ತಪ್ಪು ಮಾಡುತ್ತಲೇ ಇದೆ. ಸುಮಾರು 30 ವರ್ಷಗಳಿಂದಲೂ ಶೆ.7.5 ಮೀಸಲಾತಿಗಾಗಿ ಹೋರಾಟ ನಡೆಸುತ್ತಲೇ ಬಂದಿರುವ ಪರಿಶಿಷ್ಟ ಪಂಗಡಕ್ಕೆ ಇನ್ನೂ ಮೀಸಲಾತಿ ಘೋಷಣೆ ಮಾಡಿಲ್ಲ. ಇತ್ತೀಚೆಗಷ್ಟೇ ಪರಿಶಿಷ್ಟ ಪಂಗಡದ ಮುಖಂಡರು ಬೆಳಗಾವಿ ಮುತ್ತಿಗೆ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರೂ ಎಚ್ಚೆತ್ತುಕೊಳ್ಳದೆ ಸರ್ಕಾರ ಸದನದಲ್ಲಿ ಮೀಸಲಾತಿ ಬಗ್ಗೆ ಚೆರ್ಚೆಗೆ ಅವಕಾಶವನ್ನೇ ನೀಡದೆ ವ್ಯವಸ್ಥಿತ ಹುನ್ನಾರ ನಡೆಸಿತು. ಈಗ ಮತ್ತೊಂದು ಬೆಂಕಿ ಉಂಡೆಯನ್ನು ಮೈ ಮೇಲೆ ಎಳೆದುಕೊಂಡಿದೆ.
ಈಗ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 2022ರ ವಾರ್ಷಿಕ ಜಯಂತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಆದಿಕವಿ, ಮಹರ್ಷಿ ವಾಲ್ಮೀಕಿ ಜಯಂತಿಯನ್ನೇ ಕೈ ಬಿಟ್ಟಿದೆ. ಪದೇ ಪದೆ ಸಹನೆಯಿಂದ ಇದ್ದ ವಾಲ್ಮೀಕಿ ಸಮುದಾಯ ಈಗ ಇಡೀ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳೆಂದರೆ ಈ ಸರ್ಕಾರಕ್ಕೆ ತಾತ್ಸಾರ, ಇದರಿಂದಾಗಿ ಉದ್ದೇಶಪೂರ್ವಕವಾಗಿಯೇ ಈ ರೀತಿ ಪದೇ ಪದೆ ವಾಲ್ಮೀಕಿ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇಷ್ಟು ದಿನ ನಾವು ಮೀಸಲಾತಿ ವಿಚಾರದಲ್ಲಿ ಸುಮ್ಮನೆದ್ದುಕೊಂಡು ಬಂದೆವು. ಸರ್ಕಾರ ಇಂದಲ್ಲ ನಾಳೆ ನ್ಯಾಯ ಕೊಡುತ್ತದೆ ಎಂದು ನಂಬಿದ್ದೆವು. ಆದರೆ ಈಗ ಈ ಸರ್ಕಾರ ತನ್ನ ಅಸಲಿ ಬುದ್ದಿ ಪ್ರದರ್ಶನ ಮಾಡುತ್ತಿದೆ. ಸಾಲದ್ದಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನೇ ಕೈ ಬಿಟ್ಟು ಆದರ್ಶಮಾನ್ಯರ ಜಯಂತಿ ಆಚರಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಪದೇ ಪದೇ ಇದೇ ರೀತಿ ನಡೆದುಕೊಳ್ಳುತ್ತಿದೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಮಗೆ ಬುದ್ದಿ ಕಲಿಸಿ ಆಗಿದೆ. ಇಷ್ಟಾದ್ರೂ ನೀವು ಎಚ್ಚೆತ್ತುಕೊಳ್ಳುತ್ತಿಲ್ಲ. ಸಾಲದ್ದಕ್ಕೆ ಇಡೀ ವಾಲ್ಮೀಕಿ/ ನಾಯಕ ಸಮುದಾಯ ಪೂಜಿಸುವ, ಆರಾಧಿಸುವ ಕುಲ ಗುರು ಮಹರ್ಷಿ ವಾಲ್ಮೀಕಿ ಜಯಂತಿಯನ್ನೇ ಮರೆತು ಜಯಂತಿಗಳ ಪಟ್ಟಿ ಬಿಡುಗಡೆ ಮಾಡಿದ್ದೀರಿ ತಕ್ಷಣ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ವಿಧಾನಸೌಧ ಮುತ್ತಿಗೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಎಚ್ಚರಿಸಿದ್ದಾರೆ.