ರಾಜ್ಯ ಸುದ್ದಿ

ಶಿವಮೊಗ್ಗ ಬ್ಯಾಸ್ಕೆಟ್ ಬಾಲ್ ಕ್ಲಬ್ ಲೀಗ್ ಪಂದ್ಯದಲ್ಲಿ ಒಂದು ಅಂಕದಿಂದ ಜಯ

ದಾವಣಗೆರೆ: ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಬ್ಯಾಸ್ಕೆಟ್‌ಬಾಲ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಬಳ್ಳಾರಿಯ ಬ್ಯಾಸ್ಕೆಟ್‌ಬಾಲ್ ತಂಡಗಳು ಈ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ದಾವಣಗೆರೆ ಬ್ಯಾಸ್ಕೆಟ್ಬಾಲ್ ಕ್ಲಬ್ ಹಾಗೂ ಶಿವಮೊಗ್ಗ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡಗಳು ಫೈನಲ್ ತಲುಪಿದವು.
ಅತ್ಯಂತ ರೋಮಾಂಚನಕಾರಿಯಾಗಿ ಕೂಡಿದ್ದ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ತಂಡವು ಒಂದು ಅಂಕದಿಂದ (55-54) ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು. ದಾವಣಗೆರೆ ತಂಡವು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಮೂರನೇ ಸ್ಥಾನವನ್ನು ಬಳ್ಳಾರಿ ಬ್ಯಾಸ್ಕೆಟ್ಬಾಲ್ ಕ್ಲಬ್ ತನ್ನದಾಗಿಸಿಕೊಂಡಿತು.
ಇದೇ ಸಂದರ್ಭದಲ್ಲಿ 16 ವರ್ಷ ವಯೋಮಿತಿ ಒಳಗಿನ ಬಾಲಕರ ಮತ್ತು ಬಾಲಕಿಯರ ಆಹ್ವಾನಿತ ಲೀಗ್ ಪಂದ್ಯವನ್ನು ಕೂಡ ಆಯೋಜಿಸಲಾಗಿತ್ತು. ಎರಡೂ ವಿಭಾಗದಲ್ಲೂ ದಾವಣಗೆರೆ ತಂಡಗಳು ಮೊದಲನೇ ಸ್ಥಾನ ಹಾಗೂ ಹೊಸಪೇಟೆ ತಂಡಗಳು ದ್ವಿತೀಯ ಸ್ಥಾನ ಪಡೆದವು.
ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಮೊದಲ ಬಾರಿಗೆ ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿತ್ತು.ಫೈನಲ್ ತಲುಪಿದ ಎರಡು ತಂಡಗಳು ಬೆಂಗಳೂರಿನಲ್ಲಿ ನಡೆಯುವ ಫೈನಲ್ ಹಂತದ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡವು. ಪಂದ್ಯಾವಳಿಯ ಅತ್ಯುತ್ತಮ ಶೂಟರ್ ಆಗಿ ಶಿವಮೊಗ್ಗ ತಂಡದ ಅನಿಲ್ ರಾಜ್ ಅವರು ಹಾಗೂ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ದಾವಣಗೆರೆಯ ರವಿರಾಜ್ ಅವರು ಆಯ್ಕೆಗೊಂಡರು.
ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ 38ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರು ಆಗಿರುವ ಶ್ರೀ ಮಂಜುನಾಥ ಗಡಿಗುಡಾಳ್ ಅವರು, ಹಿರಿಯ ಬ್ಯಾಸ್ಕೆಟ್ಬಾಲ್ ಕ್ರೀಡಾಪಟುಗಳಾದ ಶ್ರೀ ಸಂಗಪ್ಪನವರು, ಶಾಂತಿನಾಥ್ ಬೋಂಡಾಳೆ, ರವಿ ಪಲ್ಲಗಟ್ಟಿ, ವಿಜಯ್ ಕುಮಾರ್ ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ಗುಣಶೇಖರ್ ರವರು ಹಾಜರಿದ್ದು ಗೆದ್ದ ತಂಡಗಳಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಸಹ ಕಾರ್ಯದರ್ಶಿಗಳಾದ ದೇವಗಿರಿ ಪ್ರಭಾಕರ್ ಎಲ್ಲರನ್ನೂ ಸ್ವಾಗತಿಸಿದರು. ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ಕ್ರೀಡಾಪಟು ರವಿರಾಜ್ ಅವರು ಬ್ಯಾಸ್ಕೆಟ್ಬಾಲ್ ಲೀಗ್ ಪ್ರಾರಂಭಿಸಿದ ಶ್ರೀಯುತ ಗೋವಿಂದರಾಜ್ ಅವರ ಬಗ್ಗೆ ಹಾಗೂ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಬ್ಯಾಸ್ಕೆಟ್ಬಾಲ್ ಟೋನಿಯಲ್ಲಿ ಹಾಗೂ ಖೇಲೋ ಇಂಡಿಯಾ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ದಾವಣಗೆರೆಯಿಂದ ಆಯ್ಕೆಯಾದ ವಿಷ್ಣು ಏನ್ ಎಂ ಮತ್ತು ನಿತಿನ್ ಕುಮಾರ್ ಅವರನ್ನು ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ದಾವಣಗೆರೆ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ವೀರೇಶ ರವರು ವಂದನಾರ್ಪಣೆ ನಡೆಸಿಕೊಟ್ಟರು ಕಾರ್ಯಕ್ರಮದ ನಿರೂಪಣೆಯನ್ನು ಜ ಜ ಮು ವೈದ್ಯಕೀಯ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಕೆ ಎನ್ ನವರು ನಡೆಸಿಕೊಟ್ಟರು.
ಕ್ರೀಡಾಪಟುಗಳಾದ ದರ್ಶನ್, ಸಚಿನ್ ಇನ್ನೂ ಇತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!