ಶಿವಮೊಗ್ಗ: ಕೋಟೆ ಮಾರಿಕಾಂಬ ಜಾತ್ರೆಗೆ ವಿದ್ಯುಕ್ತ ಚಾಲನೆ ಕೋಟೆ ಮಾರಿಕಾಂಬ ಜಾತ್ರೆ ಪ್ರಯುಕ್ತ ಶಿವಮೊಗ್ಗದಲ್ಲಿ ಮಾರ್ಗ ಬದಲಾವಣೆ
ಶಿವಮೊಗ್ಗ: ಇಲ್ಲಿನ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಬೆಳಗ್ಗೆಯಿಂದ ಗಾಂಧಿ ಬಜಾರ್‌ನಲ್ಲಿ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗಿದೆ. ಗಾಂಧಿ ಬಜಾರ್‌ನಲ್ಲಿ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಗಾಂಧಿ ಬಜಾರ್‌ನಲ್ಲಿ ಮಂಟಪ ನಿರ್ಮಿಸಿ ಮಾರಿಕಾಂಬಾ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭ ಭಕ್ತರು ಘೋಷಣೆಗಳನ್ನು ಮೊಳಗಿಸಿದರು.
ನಗರದ ಬಿ.ಬಿ ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವರು ಕೋಟೆ ಮಾರಿಕಾಂಬಾ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ನಂತರ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಮಾರಿಕಾಂಬಾ ದೇವಿಯ ತವರು ಗಾಂಧಿ ಬಜಾರ್‌ನಲ್ಲಿ ದರ್ಶನ ಪಡೆಯಲು ಭಕ್ತಸಾಗರ ಹರಿದು ಬಂದಿದೆ. ಮಂಗಳವಾರ ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೋಟೆ ಶ್ರೀ ಮಾರಕಾಂಬೆ ಜಾತ್ರೆ ಅಂಗವಾಗಿ ಶಿವಮೊಗ್ಗ ನಗರದ ವಿವಿದೆಡೆ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 22ರ ಇಂದಿನಿಂದ ಮಾರ್ಚ್ 26ರವರೆಗೆ ಜಾತ್ರೆ ನಡೆಯಲಿದೆ.ಶಿವಮೊಗ್ಗ ನಗರದ ಗಾಂಧಿಬಜಾರ್ ಮತ್ತು ಮಾರಿಕಾಂಬಾ ದೇವಸ್ಥಾನದ ಸುತ್ತಮುತ್ತಲಿನ ಹಾಗೂ ಎಸ್.ಪಿ.ಎಂ. ರಸ್ತೆಯಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಬೆಂಗಳೂರು- ಭದ್ರಾವತಿ-ಎನ್.ಆರ್. ಪುರ ಕಡೆಯಿಂದ ಬರುವ ಭಾರಿ ವಾಹನಗಳು ಮತ್ತು ಬಸ್‌ಗಳು ಎಂಆರ್‌ಎಸ್ ಸರ್ಕಲ್ ಬೈಪಾಸ್ ಮೂಲಕ ಶಿವಮೊಗ್ಗ ನಗರ ಪ್ರವೇಶ ಮಾಡುವುದು. ಚಿತ್ರದುರ್ಗ-ಹೊಳೆಹೊನ್ನೂರು ಕಡೆಯಿಂದ ಬರುವ ಭಾರೀ ವಾಹನಗಳು ಮತ್ತು ಬಸ್‌ಗಳು ವಿದ್ಯಾನಗರ-ಎಂ.ಆರ್.ಎಸ್. ಸರ್ಕಲ್ ಬೈಪಾಸ್ ಮೂಲಕ ಶಿವಮೊಗ್ಗ ನಗರ ಪ್ರವೇಶ ಮಾಡುವುದು.
ಹೊನ್ನಾಳಿ- ಹೊಳಲೂರು ಕಡೆಯಿಂದ ಬರುವ ಭಾರೀ ವಾಹನಗಳು, ಸರಕು ಸಾಗಣೆ ವಾಹನಗಳು ಮತ್ತು ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್- ಕೆಇಬಿ ಸರ್ಕಲ್- ರೈಲ್ವೆ ಸ್ಟೇಷನ್- ಉಷಾ ನರ್ಸಿಂಗ್ ಹೋಂ ಸರ್ಕಲ್- 100 ಅಡಿ ರಸ್ತೆ ಮೂಲಕ ಶಿವಮೊಗ್ಗ ನಗರ ಪ್ರವೇಶ ಮಾಡುವುದು.ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಸಂದೇಶ್ ಮೋಟಾರ್ಸ್- ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು. ಹೊಳೆ ಬಸ್ ಸ್ಟಾಪ್‌ನಿಂದ – ಬೆಕ್ಕಿನ ಕಲ್ಮಠ-ರಾಮಣ್ಣ ಶ್ರೇಷ್ಠಿ ಪಾರ್ಕ್ವರೆಗೆ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ ಮಾಡುವುದು. ಮಾರ್ಚ್ 22ರಂದು ಬೆಳಗ್ಗೆ 3 ಗಂಟೆಯಿದ ರಾತ್ರಿ 11 ಗಂಟೆವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗಾಂಧಿ ಬಜಾರ್-ಶಿವಪ್ಪನಾಯಕ ಸರ್ಕಲ್‌ವರೆಗೆ ಮತ್ತು ಶಿವಪ್ಪ ನಾಯಕ ಸರ್ಕಲ್ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧ ಮಾಡಲಾಗಿದೆ. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿ ಸಂಚರಿಸಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಲಾಗಿದೆ.