ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ

ಕೋಲಾರ: 2023 ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಹಲವು ತಿಂಗಳಿಂದ ಕ್ಷೇತ್ರ ಹುಡುಕಾಟದ ಕಸರತ್ತಿಗೆ ತೆರೆಬಿದ್ದಿದೆ.
ನಗರದ ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿದ್ದ ಕೋಲಾರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು. ಆದರೆ, ಹೈಕಮಾಂಡ್ ಒಪ್ಪಿಗೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ ಎಂದರು.
ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇದೆ. ನನ್ನ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಬೇಕಿದೆ. ನಾನೇ ಏಕಾಂಗಿಯಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಪಕ್ಷದಲ್ಲಿ ನನಗೆ ವಿಶೇಷ ನೀತಿ ಇಲ್ಲ. ಉಳಿದವರಂತೆ ನಾನು ಕೂಡ ಒಬ್ಬ. ಹೀಗಾಗಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.
ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿರುವುದರಿಂದ ಸಿದ್ದರಾಮಯ್ಯ ವಿರುದ್ಧ ತಂತ್ರ ಹೆಣೆಯಲು ಬಿಜೆಪಿ ಹಾಗೂ ಜೆಡಿಎಸ್‌ಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿದ್ದು, ಮುಂದಿನ ದಿನಗಳ ನಡೆ ಭಾರಿ ಕುತೂಹಲ ಮೂಡಿಸಿದೆ.
‘ಸಿದ್ದು ನಿಜ ಕನಸುಗಳು” ಬಿಡುಗಡೆಗೆ ತಡೆ
ಬೆಂಗಳೂರು: ‘ಸಿದ್ದು ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. “ಸಿದ್ದು ನಿಜ ಕನಸುಗಳು ಪುಸ್ತಕವನ್ನು ಇಂದು ನಗರದ ಟೌನ್ ಹಾಲ್ ನಲ್ಲಿ ಬಿಡುಗಡೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿತ್ತು. ಆದರೆ, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಈ ಸಂಬಂಧ ಡಾ. ಯತೀಂದ್ರ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನಗರದ 60ನೇ ಸಿಸಿಹೆಚ್ ನ್ಯಾಯಾಲಯ ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಪ್ರತಿವಾದಿಗಳಾಗಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅರ್ಜಿದಾರರ ಪರ ವಾದ ಮಂಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆ ಹತ್ತಿರವಿರುವಂತೆಯೇ ಬಿಜೆಪಿ ಇಂತಹ ಕುತಂತ್ರ ಮಾಡಲು ಮುಂದಾಗಿದೆ. ನಾನು ಹಿಂದೂ ಆದರೆ ಹಿಂದೂತ್ವ ವಿರೋಧಿ. ಪುಸ್ತಕದ ಮೂಲಕ ತಮ್ಮ ತೇಜೋವಧೆಗೆ ಮುಂದಾಗಿರುವುದಾಗಿ ಆರೋಪಿಸಿದರು.