ಸೋನಿಯಾ ತಲೆದಂಡಕ್ಕೆ ಹೆಚ್ಚಾಗುತ್ತಿದೆಯೇ ತೀವ್ರ ಒತ್ತಡ : ಶತಮಾನಗಳ ಇತಿಹಾಸದ ಕಾಂಗ್ರೆಸ್ ಸಾಗುತ್ತಿದೆಯೇ ಇಬ್ಬಾಗದತ್ತ?

ಬೆಂಗಳೂರು : ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದಾಗ, ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದೆ. ಇದಕ್ಕೆ, ಸೂಕ್ತ ಸಮಯದಲ್ಲಿ ಪರಿಹಾರ ಕಂಡುಕೊಳ್ಳದೇ ಇದ್ದರೆ, ಪಕ್ಷ ಸ್ಪಷ್ಟವಾಗಿ ಇಬ್ಬಾಗದತ್ತ ಸಾಗಬಹುದು ಎಂದು ವ್ಯಾಖ್ಯಾನಿ ಸಲಾಗುತ್ತಿದೆ. ಎರಡು ದಿನಗಳ ಹಿಂದೆ, ಮಾರ್ಚ್ ಹದಿನಾರರಂದು ಜಿ-23 ನಾಯಕರ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಗುಲಾಂ ನಬಿ ಆಜಾದ್ ಮನೆಯಲ್ಲಿ ಸಭೆಯನ್ನು ನಡೆಸಲಾಗಿತ್ತು. ಈ ಸಭೆಯಲ್ಲಿ ಕಪಿಲ್ ಸಿಬಲ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ ಮುಂತಾದ ನಾಯಕರು ಭಾಗವಹಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕರು ಒಂದು ಗೂಡಿದರೆ ಮಾತ್ರ ಬಿಜೆಪಿ ವಿರುದ್ದ ಸೆಣಸಲು ಸಾಧ್ಯ. ಆಯಕಟ್ಟಿನ ಪಕ್ಷದ ಹುದ್ದೆಗಳಲ್ಲಿ ಗಾಂಧಿ ಕುಟುಂಬದಿAದ ಹೊರತಾದ ಯುವಕರಿಗೆ ಅವಕಾಶ ನೀಡಬೇಕು ಎನ್ನುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು.

ಈ ಸಭೆ ನಡೆದದ್ದು ಒಂದು ಕಡೆಯಾದರೆ, ಸೋನಿಯಾ ಬಣದ ಕೆಲವು ನಾಯಕರು ಜಿ-23 ನಾಯಕರ ಸಭೆಯಲ್ಲಿ ಭಾಗವಹಿಸುವ ಮೂಲಕ, ಗಾಂಧಿ ಕುಟುಂಬದ ತೆಲೆನೋವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇದೇ ಮೊದಲ ಬಾರಿಗೆ ಸೋನಿಯಾ ಕುಟುಂಬದ ವಿರುದ್ದ ಅಸಮಾಧಾನ ಹೊರಹಾಕಿದ ಮಣಿಶಂಕರ್ ಅಯ್ಯರ್, ಶಂಕರ್ ಸಿಂಗ್ ವಾಘೇಲಾ, ಕುಲದೀಪ್ ಶರ್ಮಾ ಮುಂತಾದ ಸೋನಿಯಾ ಪಾಳಯದಲ್ಲಿದ್ದ ನಾಯಕರು ಜಿ-23 ಸಭೆಯಲ್ಲಿ ಭಾಗವಹಿಸಿ, ಗುಲಾಂ ನಬಿ ಆಜಾದ್ ತಂಡಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ. ಪಕ್ಷದ ಆಂತರಿಕ ಸಮಸ್ಯೆಗಳು ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಇಬ್ಬಾಗವಾಗುವುದು ನಿಶ್ಚಿತ ಎನ್ನುವುದನ್ನು ಅರಿತ ರಾಹುಲ್ ಗಾಂಧಿ, ಜಿ-23 ನಾಯಕರೊಬ್ಬರನ್ನು ಮಾತುಕತೆಗೆ ಕರೆದಿದ್ದರು. ಭೂಪಿಂದರ್ ಸಿಂಗ್ ಹೂಡಾ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಜಿ-23 ತಂಡದ ನಾಯಕರು ನೀಡುವ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಎನ್ನುವ ಭರವಸೆಯನ್ನು ರಾಹುಲ್ ಗಾಂಧಿಯವರು ಹೂಡಾಗೆ ನೀಡಿದ್ದಾರೆ ಎನ್ನುವ ಸುದ್ದಿಯಿದೆ. ಈ ಸಭೆಯಲ್ಲಿ ಆ ಬಣದಲ್ಲಿ ಗುರುತಿಸಿಕೊಂಡಿರುವ ಆನಂದ್ ಶರ್ಮಾ ಕೂಡಾ ರಾಹುಲ್ ಜೊತೆಗಿದ್ದರು.

“ನನಗೆ ಬೇಕಿರುವುದು ಎಲ್ಲರನ್ನೂ ಒಳಗೊಂಡ ಕಾಂಗ್ರೆಸ್, ಆದರೆ ಸೋನಿಯಾ ಗಾಂಧಿ ಸುತ್ತ ಸುತ್ತುತ್ತಿರುವ ಕೆಲವು ನಾಯಕರಿಗೆ ಒಂದು ಮನೆಯ ಕಾಂಗ್ರೆಸ್ ಆಗಿರಬೇಕು ಎನ್ನುವುದು ಆಸೆ. ಇದಕ್ಕಾಗಿಯೇ ನಮ್ಮ ವಿರೋಧ”ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. “ಹಿರಿಯರೆಂದು ಹೇಳಿಕೊಂಡು ಸುತ್ತುತ್ತಿರುವವರಿಗೆ ಚುನಾವಣೆ ಗೆಲ್ಲುವ ಶಕ್ತಿಯಿಲ್ಲ. ಮುಂದೆ ನಿಂತು ಪಕ್ಷಕ್ಕಾಗಿ ದುಡಿಯುವ ಕಾಳಜಿಯೂ ಇಲ್ಲ”ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಸದ್ಯದ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಆಶಾ ದಾಯಕವಲ್ಲ ಎನ್ನುವ ಮಾತುಗಳು ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲೇ ಕಾಂಗ್ರೆಸ್ ಮುಗ್ಗರಿಸಿದಾಗ ಪಕ್ಷ ಬಸವಳಿದಿತ್ತು. ಇದಾದ ನಂತರ ನಡೆದ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ನಿರಾಸಾದಾಯಕ ಪ್ರದರ್ಶನದ ನಂತರ ಗಾಂಧಿ ಕುಟುಂಬದ ತೆರವಿಗೆ ಪಕ್ಷದೊಳಗಿನ ಧ್ವನಿಗಳು ಏರ ತೊಡಗಿದವು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಕಾಂಗ್ರೆಸ್ ಇಬ್ಬಾಗದತ್ತ ಸಾಗುತ್ತಿದೆ. ಜಿ-23 ಎಂದೇ ಕರೆಯಲ್ಪಡುವ ಪಕ್ಷದ ಹಿರಿಯ ಸದಸ್ಯರನ್ನೊಳಗೊಂಡ ಗುಂಪು, ಹೈಕಮಾಂಡ್ ಹುದ್ದೆಯಿಂದ ಗಾಂಧಿ ಕುಟುಂಬ ಹೊರಗುಳಿಯಬೇಕು ಎನ್ನುವ ಒತ್ತಡವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡತೊಡಗಿವೆ.
ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಉತ್ತರಾಖಾಂಡ್ ಮತ್ತು ಗೋವಾದಲ್ಲಿ ಸರಿಯಾದ ಕಾರ್ಯತಂತ್ರ ರೂಪಿಸಿದ್ದರೆ ಗದ್ದುಗೆ ಏರಬಹುದಿತ್ತು, ಆದರೆ, ಪಕ್ಷ ಸರಿಯಾದ ಹೆಜ್ಜೆಯನ್ನು ಇಟ್ಟಿಲ್ಲ ಎನ್ನುವುದು ಜಿ-23 ನಾಯಕರ ಆರೋಪ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!