ಲೋಕಲ್ ಸುದ್ದಿ

ವಿದ್ಯಾರ್ಥಿಗಳು ಸೃಜನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ; ಡಾ. ಎಂ.ಈ. ಶಿವಕುಮಾರ್

ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಜತೆಗೆ ಗುರುತಿಸಲು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಪ್ರಾಧ್ಯಾಪಕರಾದ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ತಿಳಿಸಿದರು.

ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೆತ್ತವರಿಗೂ ಮತ್ತು ಓದಿದ ಸಂಸ್ಥೆಗೆ ಕೀರ್ತಿ ತನ್ನಿರಿ. ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು, ಎತ್ತರಕ್ಕೆ ಬೆಳೆಯಿರಿ. ನಿಮ್ಮ ಮೊದಲ ಸಂಬಳದಲ್ಲಿ ಒಳ್ಳೆಯ ಪುಸ್ತಕ ತೆಗೆದುಕೊಳ್ಳಿ ಹಾಗೆ ನಿಮ್ಮ ತಂದೆ-ತಾಯಿಗೆ ಒಳ್ಳೆಯ ವಸ್ತುಗಳನ್ನು ಕೊಡುಗೆಯಾಗಿ ಕೊಡಿ. ಇದರ ಜೊತೆಗೆ ನಿಮ್ಮ ಆತ್ಮಬಲ ಹೆಚ್ಚಿಸಿಕೊಂಡರೆ ನಿಮಗೆ ಯಶಸ್ಸು ನಿಮ್ಮೊಟ್ಟಿಗೆ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ. ಡಿ. ಬಿ.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತತ ಪ್ರಯತ್ನ, ಶಿಸ್ತು ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡುವುದು ವಿದ್ಯಾರ್ಥಿಗಳ ಲಕ್ಷಣಗಳು. ತನ್ನ ಸಾಮರ್ಥ್ಯವನ್ನು ತಾನು ಅರಿತು ಛಲದಿಂದ ಅಭ್ಯಾಸ ಮಾಡಿದರೆ ಮುಂದೊಂದು ದಿನ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಸದಾನಂದ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್. ಯಲ್ಲಪ್ಪ, ಪ್ರೊ.ಅಪೂರ್ವ ರಾವ್, ಪ್ರೊ. ಎಸ್. ರಘು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಫ್ರಿನ್ ಸ್ವಾಗತಿಸಿದರು.  ಶ್ರೀಗೌರಿ ವಂದಿಸಿದರು. ಎಸ್. ಸ್ಪೂರ್ತಿ, ಕೆ.ಸಿ. ವಿನು ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!