ಶಿಕ್ಷಕರ ಬೆತ್ತದೇಟು ತಿಂದೇ ಜೀವನದಲ್ಲಿ ಮುಂದೆ ಬಂದಿದ್ದೇವೆ. ಶಿಕ್ಷಕರು ಮಕ್ಕಳಿಗೆ ಬೈದು ಬುದ್ಧಿ ಹೇಳುವುದೂ ಕಷ್ಟವಾಗಿದೆ – ಮಾಜಿ ಮೇಯರ್ ಅಜಯ್ ಕುಮಾರ್
ದಾವಣಗೆರೆ: ದಾವಣಗೆರೆ ಜಿಲ್ಲಾ ೩ & ೪ ಚಕ್ರ ಗೂಡ್ಸ್ ವಾಹನ ಚಾಲಕರ ಮತ್ತು
ಮಾಲೀಕರ ಸಂಘದಿಂದ ಶಿಕ್ಷಕರಿಗೆ ಗುರುವಂದನೆ ಹಾಗೂ ಚಿತ್ರನಟರಾದ ಪುನೀತ್
ರಾಜಕುಮಾರ್, ಶಿವರಾಮ್ ನುಡಿನಮನ ಕಾರ್ಯಕ್ರಮವನ್ನು ಭಾನುವಾರ
ಸಂಜೆ ನಗರದ ಹೈಸ್ಕೂಲ್ ಮೈದಾನದ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,
ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ತುಂಬಾ ಮಹತ್ವದ್ದಾಗಿದೆ. ಬದುಕಿನ
ಯಶಸ್ಸಿಗೆ ಮುಂದೆ ಗುರಿ, ಹಿಂದೆ ಗುರು ಇರಬೇಕಾದ್ದು ಬಹುಮುಖ್ಯ. ಅಂತಹ
ಗುರುವಿಗೆ ಭಾರತೀಯ ಸಮಾಜದಲ್ಲಿ ದೈವೀ ಸ್ಥಾನ ನೀಡಲಾಗಿದೆ. ಹೀಗಾಗಿಯೇ
ಬಸವಾದಿ ಶರಣರು ಅರಿವೇ ಗುರು ಎಂಬುದಾಗಿ ಪ್ರತಿಪಾದಿಸಿದರು. ಅಂತಹ ಗುರುವಿನ
ಋಣ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು
ವಂದಿಸುವ ಮೂಲಕ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಶ್ಲಾಘನೀಯ
ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮೇಯರ್ ಬಿ.ಜಿ.ಅಜಯ ಕುಮಾರ ಮಾತನಾಡಿ, ಹಿಂದೆಲ್ಲಾ ಶಾಲೆಗಳಲ್ಲಿ ಶಿಕ್ಷೆಯ ಮೂಲಕ ಶಿಕ್ಷಣ ಕಲಿಸಲಾಗುತ್ತಿತ್ತು. ನಾನೂ ಸಹ ಸರ್ಕಾರಿ ಶಾಲೆಯಲ್ಲೇ ಓದಿದ್ದು, ಶಿಕ್ಷಕರ ಬೆತ್ತದೇಟು ತಿಂದೇ
ಜೀವನದಲ್ಲಿ ಮುಂದೆ ಬಂದಿದ್ದೇವೆ. ಆದರೆ ಈಗ ಶಿಕ್ಷಕರು ಮಕ್ಕಳಿಗೆ ಬೈದು ಬುದ್ಧಿ ಹೇಳುವುದೂ ಕಷ್ಟವಾಗಿದೆ. ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸಬೇಕೆಂಬ ಸರ್ಕಾರದ ಸೂಚನೆಯಿಂದಾಗಿ ಮಕ್ಕಳಲ್ಲಿ ಶಿಕ್ಷೆಯ ಭಯವೇ ಇಲ್ಲವಾಗಿದೆ. ಹೀಗಾಗಿ ಮಕ್ಕಳು
ದಾರಿ ತಪ್ಪುವ ಆತಂಕ ಎದುರಾಗಿದೆ ಎಂದು ವಿಷಾಧಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೂ ಪೋಷಕರು ಪ್ರತಿಷ್ಠೆಗಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಇನ್ನೂ ಹೆಚ್ಚಿನ ರಾಜಕೀಯ ಅಧಿಕಾರ ಪಡೆದಲ್ಲಿ, ಸರ್ಕಾರಿ ಶಾಲೆಗಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತಲೂ ಉನ್ನತವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ. ಅಲ್ಲದೆ, ಶಿಕ್ಷಕರಿಗೆ ಆರ್ಥಿಕ ಸಹಾಯ ಸೇರಿದಂತೆ ಎಲ್ಲಾ
ರೀತಿಯ ಅಗತ್ಯ ನೆರವು ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಎಲ್ಲಾ ಮಕ್ಕಳಿಗೂ ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ವಿದ್ಯೆ ಕಲಿಸುವ ಶಿಕ್ಷಕರ ಸೇವೆಗೆ ಬೆಲೆ ಕಟ್ಟಲಾಗದು. ಅಂತಹ ಶಿಕ್ಷಕರಿಗೆ ಕಳೆದ ೪
ವರ್ಷಗಳಿಂದ ಗುರುವಂದನೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲೂ ಈ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ೧೨೫ ಜನ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುನೀತ್
ರಾಜಕುಮಾರ್, ಶಿವರಾಮ್ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಲಾರಿ
ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಲಯನ್ಸ್ ಕ್ಲಬ್ ಅಧ್ಯಕ್ಷ ಓಂಕಾರಪ್ಪ, ಮುಖಂಡರಾದ ಬೆಳ್ಳೂಡಿ ಶಿವಕುಮಾರ, ಮಹಾಂತೇಶ ಒಣರೊಟ್ಟಿ, ದಿಲೀಪ್ ಜೈನ್, ಅಜಯ್, ಸುವರ್ಣ ಕರ್ನಾಟಕ ವೇದಿಕೆಯ
ಆರ್.ಸಂತೋಷ ಕುಮಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.