ಹೊರಗುತ್ತಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂಪಡಿಕೆ

ನೌಕರರ ಮುಷ್ಕರ
ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ಹಂತ-ಹಂತವಾಗಿ ಖಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಹೊರಗುತ್ತಿಗೆ ನೌಕರರು ಹಮ್ಮಿಕೊಂಡಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ನೇರಪಾವತಿ ಬೇಡಿಕೆಯನ್ನು ನಗರಾಭಿವೃದ್ಧಿ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಅವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಹನ ಚಾಲಕರು, ನೀರುಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ‍್ಸ್, ಯುಜಿಡಿ ಕಾರ್ಮಿಕರು ಸೇರಿದಂತೆ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ನೌಕರರು ಅನಿರ್ದಿಷ್ಠಾವಧಿ ಹಮ್ಮಿಕೊಂಡಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆಂದು ಸಂಘದ ರಾಜ್ಯಾಧ್ಯಕ್ಷ ನಾಗಣ್ಣಗೌಡ ತಿಳಿಸಿದ್ದಾರೆ.
ನೇರಪಾವತಿಯನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವುದನ್ನು ಖಾತ್ರಿ ಪಡಿಸುವಂತೆ ನಮ್ಮ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ ಎಂಬ ಘೋಷ ವಾಕ್ಯದಡಿ ಫೆ.೧೧ರಂದು ರಾಮನಗರ ಜಿಲ್ಲೆಯಿಂದ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಹೋರಾಟಕ್ಕೆ ಮರು ಚಾಲನೆ ನೀಡಲಾಗುವುದು. ಈ ಪಾದಯಾತ್ರೆ ಜಾಥಾದಲ್ಲಿ ಎಲ್ಲಾ ಜಿಲ್ಲೆಗಳಿಂದ ಹೊರಗುತ್ತಿಗೆ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.