ಅಪ್ರಾಪ್ತ ಬಾಲಕಿಯ ಮದುವೆ ತಡೆದ ಕೊಲ್ಯಾಬ್ ತಂಡ

ಬಾಲಕಿಯ ಮದುವೆ ತಡೆದ ಕೊಲ್ಯಾಬ್ ತಂಡ
ದಾವಣಗೆರೆ: ಅಪ್ರಾಪ್ರ ವಯಸ್ಸಿನ ಬಾಲಕಿಯ ಮದುವೆ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮಪಂಚಾಯಿತಿ ಕಾರ್ಯದರ್ಶಿ, ಶಾಲಾ ಮುಖ್ಯ ಶಿಕ್ಷಕರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅಂಗವಾಡಿ ಮೇಲ್ವಿಚಾರಕರು ಮತ್ತು ಪೋಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದಾವಣಗೆರೆ ತಾಲೂಕಿನ ಗ್ರಾಮಪಂಚಾಯಿತಿಯ ಗ್ರಾಮವೊಂದರ ಅಪ್ರಾಪ್ತೆಯ ವಿವಾಹವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಡ್ಡೆಹಳ್ಳಿ ಗ್ರಾಮದ 23ವರ್ಷ ವರನೊಂದಿಗೆ ಫೆಬ್ರವರಿ 10ಕ್ಕೆ ನಡೆಯಲಿದೆ ಎಂದು ಅಪರಿಚಿತರೊಬ್ಬರು ಮಕ್ಕಳಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಮಕ್ಕಳು ಸಹಾಯವಾಣಿಯ ಕೊಲ್ಯಾಬ್ ಡಾನ್ ಬಾಸ್ಕೋದ ಸಂಯೋಜಕರಾದ ಟಿ.ಎಂ.ಕೊಟ್ರೇಶ್, ಕಾರ್ಯಕರ್ತರಾದ ವಿ.ಮಂಜುಳಾ, ಟಿ.ನಾಗರಾಜ ತಂಡವು ಬಾಲಕಿ ವಿದ್ಯಾಭ್ಯಾಸ ಮಾಡಿದ್ದ ಶಾಲೆಯಿಂದ ಜನ್ಮದಿನಾಂಕ ದೃಢೀಕರಣ ಪತ್ರ ಪಡೆದು ಪರಿಶೀಲಿಸಲಾಗಿ ಬಾಲಕಿಗೆ 17 ವರ್ಷ 1 ತಿಂಗಳೆAದು ತಿಳಿಯಿತು.
ಕೂಡಲೆ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡವು ಕಾಡಜ್ಜಿಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕೆಂಚಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಮುಖ್ಯ ಶಿಕ್ಷಕ ಕೆ.ಎಸ್.ನಾಗರಾಜ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾದರ್ಶಿನಿ, ಅಂಗನವಾಡಿ ಮೇಲ್ವೀಚಾರಕಿ ಕವಿತ, ಪೋಲೀಸ್ ಇಲಾಖೆಯ ಮುಖ್ಯ ರೈತ ಮುಖಂಡ ಚಂದ್ರಪ್ಪ ಇವರೊಂದಿಗೆ ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಯ ಪೋಷಕರಿಗೆ ಬಾಲ್ಯ ವಿವಾಹದ ದುಷ್ಟರಿಣಾಮಗಳ ಬಗ್ಗೆ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಿ, ಸೂಕ್ತ ಪೋಷಣೆ ಮತ್ತು ರಕ್ಷಣೆ ಕಲ್ಪಿಸುವ ಸಲುವಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸುವ ಮೂಲಕ ಮುಂದೆ ನಡೆಯಲಿದ್ದ ಬಾಲ್ಯವಿವಾಹವನ್ನು ತಡೆದಿದೆ.