ಜನರಿಗೆ ದಾರಿ ತಪ್ಪಿಸಿ, ಬಿಜೆಪಿ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸಲು ದಾವಣಗೆರೆ ಕಾಂಗ್ರೆಸ್ ಯತ್ನಿಸುತ್ತಿದೆ – ಉಪಮೇಯರ್ ಶಿಲ್ಪಾ ಜಯಪ್ರಕಾಶ್
ದಾವಣಗೆರೆ: ಕಾಂಗ್ರೆಸ್ ಪಾಲಿಕೆ ಆಡಳಿತದ ಬಗ್ಗೆ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಜನರಿಗೆ ದಾರಿ ತಪ್ಪಿಸಿ, ಬಿಜೆಪಿ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಪಾಲಿಕೆಯ ಉಪಮೇಯರ್ ಶಿಲ್ಪಾ ಜಯಪ್ರಕಾಶ್ ಹೇಳಿದರು.
ಮೇಯರ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಅವರು ಬಿಜೆಪಿ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಸುಳ್ಳಿನಿಂದ ಕೂಡಿದ್ದು, ಇವೆಲ್ಲ ನಿರಾಧಾರ ಆರೋಪ ಎಂದರು.
ಬಿಜೆಪಿ ಸಾಮಾನ್ಯ ಸಭೆ ನಡೆಸುವಲ್ಲಿ ವಿಫಲವಾಗಿದೆ ಎನ್ನುವ ಕಾಂಗ್ರೆಸ್ ತನ್ನ ಆಡಳಿತದಲ್ಲಿ ಎಷ್ಟೆಷ್ಟು ಸಾಮಾನ್ಯ ಸಭೆ ನಡೆಸಿದ್ದಾರೆ ಅನ್ನುವುದನ್ನು ಅವರು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೇವಲ ಎರಡ್ಮೂರು ಸಭೆ ಮಾತ್ರ ನಡೆದಿದೆ ಎಂದು ಮಾಹಿತಿ ನೀಡಿದರು.
ವಾಣಿಜ್ಯ ಕಸ ಹಾಗೂ ಕಲ್ಯಾಣ ಮಂಟಪದ ಕಸ ಸಂಗ್ರಹಣೆಗಾಗಿ ಏಜೆನ್ಸಿಗಳಿಗೆ ನೀಡಿದ ಶುಲ್ಕದ ಪದ್ಧತಿಯನ್ನು ಕಾಂಗ್ರೆಸ್ ಆಡಳಿತಾವಧಿಯಲ್ಲಿ 2018ರಲ್ಲಿ ಜಾರಿಗೆ ತಂದಿತ್ತು. ಅದು ನಮ್ಮ ಆಡಳಿತದಲ್ಲಿ ಹೊಸದಾಗಿ ಜಾರಿಗೆ ಬಂದಿಲ್ಲ. ಏಜೆನ್ಸಿದಾರರು ಸಂಗ್ರಹಿಸಿದ ಶುಲ್ಕದಲ್ಲಿ ಪಾಲಿಕೆಗೆ ಕಟ್ಟಬೇಕಾದ ಹಣ ಕಟ್ಟುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ಬಿಜೆಪಿ ಅಲಾಡಳಿತದಲ್ಲಿ ಪಾಲಿಕೆಯಲ್ಲಿ ಎನ್ ಓಸಿ ಪಡೆಯಲು ಲಂಚ ಪಡೆದುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನವರು ಆರೋಪಿಸಿದ್ದು, ಈ ಕುರಿತು ಸಾರ್ವಜನಿಕರು ಆಧಾರ ಸಹಿತ ದೂರು ನೀಡಿದರೆ ಕ್ರಮವಹಿಸಲಾಗುವುದು ಹಾಗೂ ಆಂತರಿಕ ತನಿಖೆಯೂ ಮಾಡಲಾಗುವುದು. ಒಂದು ವೇಳೆ ಆಯುಕ್ತರೇ ಲಂಚಕ್ಕೆ ಬೇಡಿಕೆ ಇಟ್ಟ ಸಾಕ್ಷಿ ದೊರೆತರೆ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಮೇಯರ್ ಎಸ್.ಟಿ. ವೀರೇಶ್ ಅಧಿಕಾರಕ್ಕೆ ಬಂದ ನಂತರ 316 ಕಾಮಗಾರಿಗಳು ನಡೆಯುತ್ತಿವೆ. ಎವಿಕೆ ಕಾಲೇಜಿನ ಬೀದಿ ದೀಪಗಳನ್ನು ಅಳವಡಿಸಿದ ಸಂಸ್ಥೆಯಿಂದ ದೀಪಗಳ ನಿರ್ವಹಣೆ ಇನ್ನೂ ಹಸ್ತಾಂತರವಾಗಿಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ಲೋಪಗಳೇ ಕಾರಣ. ಆದರೆ, ಬಿಜೆಪಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಬಿ. ಗೋಣೆಪ್ಪ, ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯಪ್ಪ, ರೇಖಾ ಸುರೇಶ್, ಗೌರಮ್ಮ, ಸೌಮ್ಯ ನರೇಂದ್ರಕುಮಾರ್, ಗಾಯತ್ರಿ ಬಾಯಿ ಮತ್ತಿತರರಿದ್ದರು.