ಆನೆ ದಾಳಿಗೆ ತುತ್ತಾಗಿದ್ದ ವೈದ್ಯರು ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ

ದಾವಣಗೆರೆ: ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ಯವರ ಆರೋಗ್ಯದಲ್ಲಿ ಕೊಂಚ ಮಟ್ಟಿನ ಸುಧಾರಣೆ ಕಂಡು ಬಂದಿದೆ. ಈ ನಡುವೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ವಿಶೇಷ ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿಗೆ ಅವರನ್ನು ಜೀರೋ ಟ್ರಾಫಿಕ್ನಲ್ಲಿ ಕರೆದೊಯ್ಯಲಾಗುತ್ತಿದೆ.
ಏರ್ಲಿಫ್ಟ್ಗೆ ನಡೆದಿತ್ತು ಸಿದ್ಧತೆ:
ಈ ಮೊದಲು ಅವರನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿತ್ತು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದಕ್ಕಾಗಿ ಸಕಲ ತಯಾರಿ ನಡೆಸಿ ಅರಣ್ಯ ಭವನದಿಂದಲೇ ಅನುಮತಿ ಪಡೆದಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಏರ್ಲಿಫ್ಟ್ ಪ್ಲಾನ್ ವಿಫಲವಾಗಿದೆ.
ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ:
ಇದೀಗ ಬಂದ ಮಾಹಿತಿಯ ಪ್ರಕಾರ, ಬೆಂಗಳೂರಿನ ಮಣಿಪಾಲ್ ಹಾಸ್ಟಿಟಲ್ನಿಂದ ವಿಶೇಷ ರೆಸ್ಕ್ಯೂ ಟೀಂ ಸ್ಪೆಷಲ್ ಆ್ಯಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದು, ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯನ್ನು ತಲುಪಲಿದೆ. ಆ್ಯಂಬುಲೆನ್ಸ್ ತಲುಪುತ್ತಲೆ ಡಾ.ವಿನಯ್ರನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್ನಲ್ಲಿ ಶಿಫ್ಟ್ ಮಾಡಲಾಗುತ್ತದೆ.
ಸುಮಾರು ಮೂರುವರೆ ನಾಲ್ಕು ಗಂಟೆಗಳಲ್ಲಿ ಆ್ಯಂಬುಲೆನ್ಸ್ ರಾಜಧಾನಿ ತಲುಪಲಿದ್ದು, ಅಲ್ಲಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ಡಾ.ವಿನಯ್ರವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆನೆ ದಾಳಿಯಿಂದ ಗಾಯಗೊಂಡಿದ್ದ ವಿನಯ್ ಚನ್ನಗಿರಿಯ ಸೂಳೆಕೆರೆಯ ಬಳಿಯಲ್ಲಿ ಅಪ್ರಾಪ್ತೆಯೊಬ್ಬರನ್ನು ತುಳಿದು ಸಾಯಿಸಿದ್ದ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಡಾ.ವಿನಯ್ ಪಾಲ್ಗೊಂಡಿದ್ದರು. ಕಾರ್ಯಾಚರಣೆಯನ್ನು ಲೀಡ್ ಮಾಡುತ್ತಿದ್ದ ಅವರು ಆನೆಗೆ ಡಾರ್ಟ್ ಮಾಡಿದ್ದರು. ಈ ವೇಳೆ ಆನೆ ಅವರ ಮೇಲೆಯೇ ದಾಳಿ ಮಾಡಿತ್ತು. ಘಟನೆಯಲ್ಲಿ ಆನೆ ದಾಳಿಗೆ ತುತ್ತಾದ ಡಾ.ವಿನಯ್ರವರ ಕೈಗೆ ಹಾಗು ಬೆನ್ನಿನ ಹುರಿಗೆ ತೀವ್ರವಾದ ಗಾಯಗಳಾಗಿದ್ದವು. ಅಂದು ಅವರನ್ನ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. , ಅಲ್ಲಿಂದ ಇಲ್ಲಿಯವರೆಗೂ ಎಂಐಸಿಯುನಲ್ಲಿ ಡಾ.ವಿನಯ್ರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಈ ಮಧ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಅವರನ್ನು ಶಿಫ್ಟ್ ಮಾಡಲು ತಜ್ಞ ವೈದ್ಯರ ತಂಡ ನಿರ್ಧರಿಸಿದೆ.