ಮಗಳಿಗೆ ಲತಾ ಪ್ರಜಾಕೀಯ ಎಂದು ಹೆಸರಿಟ್ಟ ತಂದೆ.!

ದಾವಣಗೆರೆ : ಶಾಸ್ತ್ರ ಸಂಪ್ರದಾಯ ಅಂತ ನೂರಾರು ದೇವರಿಗೆ ಹರಕೆ ಹೊತ್ತು ಮಕ್ಕಳಿಗೆ ಹೆಸರಿಡುವ ಕಾಲದಲ್ಲಿ ಇಲ್ಲೊಬ್ಬರು ಇವೆಲ್ಲ ಇಲ್ಲದೆ ವ್ಯವಸ್ಥೆ ಬದಲಾವಣೆ ನನ್ನಿಂದ ಸಾಧ್ಯ ಎಂದರಿತು ತನ್ನ ಮಗಳಿಗೆ ಲತಾ ಪ್ರಜಾಕೀಯ ಎಂದು ನಾಮಕರಣ ಮಾಡಿದ್ದಾರೆ.
ಹೌದು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಕ್ಯಾತಗೊಂಡನಹಳ್ಳಿ ಗ್ರಾಮದ ನಾಗರಾಜ ಎಂಬ ವ್ಯಕ್ತಿಯೇ ತನ್ನ ಮಗಳಿಗೆ ಲತಾ ಪ್ರಜಾಕೀಯ ಎಂದು ಹೆಸರಿಟ್ಟಿರುವುದು.
ಸಾಮಾನ್ಯವಾಗಿ ಒಂದು ಮಗುವಿಗೆ ಹೆಸರಿಡುವಾಗ ಶಾಸ್ತ್ರ ಸಂಪ್ರದಾಯ, ಘಳಿಗೆ, ನಕ್ಷತ್ರ ನೋಡಿ ಯಾವ ಹೆಸರನ್ನು ಇಟ್ಟರೆ ಒಳ್ಳೆಯದು ಸೇರಿದಂತೆ ನಾನಾ ರೀತಿಯಲ್ಲಿ ಯೋಚನೆ ಮಾಡಿ ಹೆಸರಿಡುವ ಈ ವ್ಯವಸ್ಥೆಯಲ್ಲಿ ಒಂದು ರಾಜಕೀಯ ಪಕ್ಷದ ಹೆಸರು ಸೇರಿಸಿ ನಾಮಕರಣ ಮಾಡಿರುವುದು ಅಸಾಮಾನ್ಯವಾದದ್ದು..
ಈ ಬಗ್ಗೆ ನಾಗರಾಜ್ ಅವರು ಗರುಡವಾಯ್ಸ್ ನೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಸಮಾಜದಲ್ಲಿ ನಮ್ಮಿಂದ ಆದ ತಪ್ಪು ನಮ್ಮ ಕಾಲಕ್ಕೆ ಮುಗಿದುಹೋಗಲಿ, ಮುಂದಿನ ಪೀಳಿಗೆಗೆ ವ್ಯವಸ್ಥೆ ಬೇರೆ ನಾವೇ ಬೇರೆ ಅನ್ನುವ ನಮ್ಮಲ್ಲಿದ್ದ ತಪ್ಪು ಆಲೋಚನೆಗಳು ಬರುವುದು ಬೇಡ. ನಮ್ಮಿಂದಲೇ ವ್ಯವಸ್ಥೆ ಅನ್ನುವ ಸಾಮಾನ್ಯ ಪ್ರಜ್ಞೆ ಅವರಲ್ಲಿ ಮೂಡಬೇಕು. ಉತ್ತಮ ಸಮಾಜ ನಿರ್ಮಾಣ ಎಲ್ಲರಿಂದ ಮಾತ್ರ ಸಾಧ್ಯ. ಹಾಗಾಗಿ ನನ್ನ ಮಗಳಿಗೆ ಉತ್ತಮ ವಿಚಾರಧಾರೆ ಎರೆದ ಪ್ರಜಾಕೀಯ ಎಂಬ ತತ್ವದೊಂದಿಗೆ ಲತಾ ಪ್ರಜಾಕೀಯ ಎಂದು ಹೆಸರಿಟ್ಟಿದ್ದೇನೆ ಎಂದರು.
ಬದಲಾವಣೆ ಎನ್ನುವುದು ಒಬ್ಬರಿಂದ ಆಗುವ ಪ್ರಕ್ರಿಯೆಯಲ್ಲ ಅದು ಪ್ರತಿಯೊಬ್ಬರಿಂದಲೂ ಆಗುವಂತದ್ದು, ನಮ್ಮಲ್ಲಿ ಸಮಾಜ ಬೇರೆ ನಾವೇ ಬೇರೆ ಎಂಬ ತಪ್ಪು ಕಲ್ಪನೆಗಳಿವೆ. ನಮ್ಮಿಂದಲೇ ಸಮಾಜ. ನಾವು ಯೋಚನೆ ಮಾಡುವ ಶೈಲಿ ಬದಲಾಗಬೇಕಿದೆ. ನಾಯಕ ಸಂಸ್ಕೃತಿ ತೊರೆದು ಕಾರ್ಮಿಕ ಸಂಸ್ಕೃತಿಗೆ ಒತ್ತು ನೀಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಯಾರೋ ಒಬ್ಬ ನಾಯಕನಿಂದ ನಮ್ಮ ಉದ್ದಾರ ಆಗುತ್ತೆ ಅನ್ನೋದು ಸುಳ್ಳು. ಪ್ರತಿಯೊಬ್ಬರಿಗೂ ಒಂದು ಅದ್ಭುತ ಶಕ್ತಿ ಇದೆ. ಅದನ್ನರಿತು ಸಮಾಜ ಸುಧಾರಣೆಗೆ ಶ್ರಮಿಸಬೇಕು. ಇದೆ ಮಹಾದಾಸೆಯಿಂದ ಮಗಳಿಗೆ ಲತಾ ಪ್ರಜಾಕೀಯ ಎಂಬ ಹೆಸರು ನಾಮಕರಣ ಮಾಡಿದ್ದೇನೆ. ಈ ಕೆಲಸ ನನ್ನಲ್ಲಿ ಸಾರ್ಥಕ ಭಾವನೆ ತಂದಿದೆ ಎಂದರು.