Transfer : ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ, ಮತ್ತೆ ಜುಲೈ 3 ರವರೆಗೆ ವಿಸ್ತರಿಸಿದ ಸರ್ಕಾರ

ಬೆಂಗಳೂರು : ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಡುತ್ತಲೇ ಬಂದಿರುವ ನೂತನ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಣೆಯನ್ನು ಮಾಡಿದೆ. ಈ ಮೂಲಕ ವರ್ಗಾವಣೆಗೆ ಪರದಾಡುತ್ತಿರುವ ಅಧಿಕಾರಿಗಳಿಗೆ ಅನುಕೂಲ ಆಗಲಿದೆ.
ಜೂನ್ 1 ರಿಂದ 15 ರವರೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿತ್ತು. ಇದಾದ ನಂತರ ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲಿ ಜೂ.30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ವಿಸ್ತರಣೆ ಮಾಡಿರುವ ಸರ್ಕಾರ ಜುಲೈ 3ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮುಖ್ಯವಾಗಿ ಸರ್ಕಾರಿ ನೌಕರರ ವರ್ಗಾವಣೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಆಯಾ ಸಂಬಂಧಿತ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ. ಇನ್ನು ಆಯಾ ಇಲಾಖಾ ಸಚಿವರೇ ತಮ್ಮ ಇಲಾಖೆಗೆ ಸಂಬಂಧಿಸಿದ ವರ್ಗಾವಣಾ ಕಾರ್ಯಗಳನ್ನು ನಿರ್ವಹಣೆ ಮಾಡುವಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4 ಹೆಚ್ಚಳ ಮಾಡಿ ಸಿಹಿ ಸುದ್ದಿಯನ್ನು ನೀಡಿತ್ತು. ಇದಾದ ನಂತರ, ಹಲವು ವರ್ಷಗಳಿಂದ ವರ್ಗಾವಣೆಗೆ ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಅನುಕೂಲ ಆಗುವಂತೆ ಸಾರ್ವತರಿಕ ವರ್ಗಾವಣೆಗೂ ಚಾಲನೆಯನ್ನು ನೀಡಿತ್ತು.