ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಈ ಅಜ್ಜಿ..!

ಬೆಂಗಳೂರು : ಜಪಾನ್‌ನ ಅಜ್ಜಿಯೊಬ್ಬರು ಎಲ್ಲರಿಗಿಂತ ಹೆಚ್ಚು ಕಾಲ ಬದುಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜಪಾನ್‌ನ ಫುಕುವೋಕಾದ ಕೇನ್ ತನಕಾ ಅವರು 9 ಮಾರ್ಚ್ 2019ರ ವೇಳೆಗೆ 116 ವರ್ಷ 66 ದಿನ ತುಂಬಿದ್ದು, ಅವರು ಜಗತ್ತಿನ ಅತ್ಯಂತ ಹಳೆಯ ವ್ಯಕ್ತಿ ಎಂದು ಅಧಿಕೃತವಾಗಿ ದೃಢಿಕರಿಸಲ್ಪಟ್ಟಿದೆ. 30 ಜನವರಿ 2019 ರಂದು (ಅವರಿಗೆ 116 ವರ್ಷ 28 ದಿನಗಳಾಗಿದ್ದಾಗ) ಜಪಾನ್‌ನ ಸೂಪರ್ ಸೆಂಟೆನೇರಿಯನ್ ಅವರು ಕೇನ್ ತನಕಾ ಅವರು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ದೃಢೀಕರಿಸಿದ್ದಾರೆ. ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅತ್ಯಂತ ಹಳೆಯ ಮಹಿಳೆಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗಿದೆ. ಕೇನ್ 2 ಜನವರಿ 1903 ರಂದು ಅವಧಿಪೂರ್ವ ಜನಿಸಿದರು. ಅವರು ಜನಿಸಿದ ವರ್ಷವೇ ರೈಟ್ ಸಹೋದರರು ಮೊದಲ ಬಾರಿ ವಿಮಾನ ಹಾರಾಟ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿದ್ದರು. ಕುಮಾಕಿಚಿ ಮತ್ತು ಕುಮಾ ಓಟಾ ಅವರ ಏಳನೇ ಮಗುವಾಗಿ ಜನಿಸಿದ ಕೇನ್ ತನ್ನ 19ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ 6 ಜನವರಿ 1922 ರಂದು ಹಿಡಿಯೊ ತನಕಾ ಅವರ ಕೈ ಹಿಡಿದರು.

ಮದುವೆಯಲ್ಲಿ ಮೊದಲ ಬಾರಿ ನೋಡಿದ ಕೇನ್ ಹಾಗೂ ಹಿಡಿಯೋ ತನಕಾ ನಾಲ್ಕು ಮಕ್ಕಳನ್ನು ಹೊಂದಿದ್ದು, ಮತ್ತೊಂದು ಮಗುವನ್ನು ದತ್ತು ಪಡೆದರು. ಹಿಡಿಯೊ ತನಕಾ ತಮ್ಮ ಕುಟುಂಬದವರೇ ನಡೆಸುತ್ತಿದ್ದ ವ್ಯಾಪಾರದಲ್ಲೇ ವೃತ್ತಿ ಮುಂದುವರೆಸಿದ್ದರು. ಇದು ಜಿಗುಟಾದ ಅಕ್ಕಿ, ಝೆಂಜೈ (ಜಪಾನೀಸ್ ಸಿಹಿತಿಂಡಿಗಳ ಒಂದು ವಿಧ) ಮತ್ತು ಉಡಾನ್ ನೂಡಲ್ಸ್ ಅನ್ನು ತಯಾರಿಸಿ ಮಾರಾಟ ಮಾಡುವ ಉದ್ಯಮವಾಗಿತ್ತು.

1937 ರಲ್ಲಿ ಎರಡನೇ ಸಿನೋ-ಜಪಾನೀಸ್ ಯುದ್ಧದ ಸಮಯದಲ್ಲಿ ಹಿಡಿಯೊ ಅವರು ಮಿಲಿಟರಿಗೆ ಸೇರಿದಾಗ, ಕೇನ್ ತನ್ನ ಮಕ್ಕಳು ಮತ್ತು ಅತ್ತೆಯನ್ನು ನೋಡಿಕೊಳ್ಳುತ್ತ ಕುಟುಂಬದ ವ್ಯವಹಾರದಲ್ಲಿ ಹೆಚ್ಚು ತೊಡಗಿಸಿಕೊಂಡರು, ಅಕ್ಕಿ ಪಾಲಿಶ್ ಮತ್ತು ಅಕ್ಕಿ ಕೇಕ್ ತಯಾರಿಸುತ್ತಿದ್ದರು. ಕೇನ್ ಅವರ ಮೊದಲ ಮಗ ನೊಬುವೊ ಕೂಡ 1943ರಲ್ಲಿ ಮಿಲಿಟರಿಗೆ ಸೇರಿದರು ಮತ್ತು ಎರಡನೆಯ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ವಶದಲ್ಲಿದ್ದ ಅವರು 1947ರಲ್ಲಿ ಜಪಾನ್‌ಗೆ ಹಿಂದಿರುಗಿದರು. ಹೆಚ್ಚು ವರ್ಷ ಜೀವಿಸುತ್ತಿರುವ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂದು ಪ್ರಶಸ್ತಿ ನೀಡಿದ ಸಮಾರಂಭದಲ್ಲಿ, ಕೇನ್‌ಗೆ ಚಾಕೊಲೇಟ್‌ಗಳ ಪೆಟ್ಟಿಗೆಯನ್ನು ನೀಡಲಾಯಿತು. ಚಾಕೋಲೆಟ್ ಬಾಕ್ಸ್ ಕೈಗೆ ಸಿಗುತ್ತಿದ್ದಂತೆ ಅವರು ಅದನ್ನು ತೆರೆದು ಚಾಕೋಲೇಟ್ ತಿನ್ನಲು ಆರಂಭಿಸಿದರು. ಹೀಗಾಗಿ ಅಲ್ಲಿದವರು ಈ ಹಿರಿಯಜ್ಜಿಗೆ ಇಂದು ಎಷ್ಟು ಚಾಕೊಲೇಟ್‌ಗಳನ್ನು ತಿನ್ನಲು ಬಯಸುತ್ತೀರಿ ಎಂದು ಕೇಳಿದರು. ಆಗ ಅವರು ನೂರು ಎಂದು ಉತ್ತರಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!