ರೈಲು ಅಪಘಾತ ತಪ್ಪಿಸಿದ ಮಹಿಳೆಗೆ ಎಲ್ಲೆಡೆ ಪ್ರಶಂಸೆ

ಮಂಗಳೂರು: ಆಕೆಗೆ ವಯಸ್ಸು 70 ವರ್ಷ. ಇತ್ತೀಚೆಗಷ್ಟೇ ಹೃದಯ ಶಸ್ತ್ರ ಚಿಕಿತ್ಸೆಯಾಗಿತ್ತು. ಇದಾವುದು ಆಕೆಯ ಸಾಹಸಕ್ಕೆ ಅಡ್ಡಿಯಾಗಲಿಲ್ಲ. ಬರೋಬ್ಬರಿ 150 ಕಿಲೋ ಮೀಟರ್ ಓಡಿ ರೈಲು ಅಪಘಾತವೊಂದನ್ನು ತಪ್ಪಿಸಿದ ಈ ಮಹಿಳೆಯ ಹೆಸರು ಚಂದ್ರಾವತಿ. ಈಕೆಗೆ ಈಗ ಪ್ರಶಂಸೆಯ ಸುರಿ ಮಳೆಯೇ ಹರಿದು ಬರತೊಡಗಿದೆ.
ಹೌದು, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 70 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಿಂದ 150 ಮೀಟರ್ ಓಡಿ, ಕೆಂಪು ಬಟ್ಟೆಯೊಂದನ್ನು ಬೀಸಿ ನಗರದಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಮರಕ್ಕೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದಾರೆ. ಈ ಘಟನೆ ಮಾರ್ಚ್ 21 ರಂದು ನಡೆದಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.
ಈ ದೊಡ್ಡ ಅಪಘಾತವನ್ನು ತಪ್ಪಿಸಿದ್ದಕ್ಕಾಗಿ ಮಹಿಳೆ ಚಂದ್ರಾವತಿ ಅವರನ್ನು ರೈಲ್ವೆ ಇಲಾಖೆ ಬುಧವಾರ ಸನ್ಮಾನಿಸಿತು. ಊಟದ ನಂತರ ನಿದ್ದೆ ಮಾಡಲು ತಯಾರಿ ನಡೆಸುತ್ತಿದ್ದಾಗ ಗುಡ್ಡ ಬೀಳುವಂಥ ದೊಡ್ಡ ಶಬ್ದ ಕೇಳಿಸಿದೆ. ತಕ್ಷಣವೇ ಪಡೀಲ್ ಮತ್ತು ಜೋಕಟ್ಟೆ ನಡುವಿನ ಪಚನಾಡಿ ಬಳಿಯ ಮಂದಾರ ಎಂಬಲ್ಲಿನ ತನ್ನ ಮನೆಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ರೈಲ್ವೆ ಹಳಿಯ ಕಡೆಗೆ ಓಡಿದ್ದಾರೆ.
ಈ ವೇಳೆ ಟ್ರ್ಯಾಕ್ ಮೇಲೆ ಬಿದ್ದಿರುವ ದೊಡ್ಡ ಮರ ಅವರಿಗೆ ಕಾಣಿಸಿದೆ. ಅದು ಸಂಪೂರ್ಣ ರೈಲ್ವೆ ಹಳಿಯನ್ನು ಮುಚ್ಚಿತ್ತು. ಅಂದು ಮಧ್ಯಾಹ್ನ 2.10 ಗಂಟೆ ಆಗಿತ್ತು ಮತ್ತು ಮುಂದಿನ 10 ನಿಮಿಷಗಳಲ್ಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರಿನಿಂದ ಮುಂಬೈಗೆ ಹೊರಡುವ ವಿಚಾರ ಅವರಿಗೆ ತಿಳಿದಿತ್ತು.
ಮುಂಬೈನಲ್ಲಿನ ಸಂಬಂಧಿಕರು ಅದೇ ರೈಲನ್ನು ನಿಯಮಿತವಾಗಿ ಬಳಸುತ್ತಿದ್ದರಿಂದ ಆಕೆಗೆ ರೈಲಿನ ಸಮಯ ತಿಳಿದಿತ್ತು. ಈ ವೇಳೆ ಭರವಸೆಯನ್ನು ಕಳೆದುಕೊಳ್ಳದೆ, ದೇವರನ್ನು ಸ್ಮರಿಸಿ, ತನ್ನ ಮನೆಯ ಕಡೆಗೆ ಓಡಿ ಒಣಗಲು ಹಾಕಿದ್ದ ಮೊಮ್ಮಗನ ಕೆಂಪು ಬರ್ಮುಡಾವನ್ನು ಹಿಡಿದು ಟ್ರ್ಯಾಕ್‌ನತ್ತ ಮರಳಿದ್ದಾರೆ. ರೈಲು ಆ ಸ್ಥಳದತ್ತ ಸಾಗುತ್ತಿದ್ದಂತೆ ಅವರು ಅದನ್ನು ಬಿರುಸಿನಿಂದ ಬೀಸಿದ್ದಾರೆ. ಇದನ್ನು ಕಂಡ ರೈಲು ಸುರಕ್ಷಿತ ದೂರದಲ್ಲಿ ನಿಂತಿತು ಮತ್ತು ಚಂದ್ರಾವತಿ ದೊಡ್ಡ ನಿಟ್ಟುಸಿರು ಬಿಟ್ಟರು. ಚಂದ್ರಾವತಿ ಅವರನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮಂಗಳವಾರ ಅಭಿನಂದಿಸಿದರು
ಲೊಕೊ ಪೈಲಟ್ ಮತ್ತು ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಚಂದ್ರಾವತಿಯ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ಮರವನ್ನು ಕಡಿದು ಹಳಿಯಿಂದ ಹೊರತೆಗೆದು ಮಧ್ಯಾಹ್ನ 3.30ರ ಸುಮಾರಿಗೆ ಹೊರಡುವವರೆಗೂ ರೈಲು ಸ್ಥಳದಲ್ಲಿಯೇ ನಿಂತಿತ್ತು. ಮರ ಬಿದ್ದಾಗ, ಮಗ ಮತ್ತು ಮೊಮ್ಮಗ ಕೆಲಸಕ್ಕೆ ಮತ್ತು ಕಾಲೇಜಿಗೆ ಹೋಗಿದ್ದರಿಂದ ಮನೆಯಲ್ಲಿ ತಾನೊಬ್ಬಳೇ ಇದ್ದೆ ಎಂದು ಚಂದ್ರಾವತಿ ಹೇಳಿದರು.
ಹಳಿಯಿಂದಾಗಿ ನಮ್ಮ ಮನೆಗೆ ಪ್ರವೇಶ ರಸ್ತೆ ಇಲ್ಲ. ಹೀಗಾಗಿ, ನನ್ನ ಪತಿ ತಮ್ಮ ವಾಹನವನ್ನು ಟ್ರ್ಯಾಕ್‌ನ ಇನ್ನೊಂದು ಬದಿಯಲ್ಲಿರುವ ಮತ್ತೊಬ್ಬರ ಮನೆ ಬಳಿ ನಿಲ್ಲಿಸಿ ಮನೆಗೆ ಬರುತ್ತಿದ್ದರು. ಈ ವೇಳೆ ಅವರು ಟ್ರ್ಯಾಕ್ ಮೇಲೆ ಎಡವಿ ಬಿದ್ದು ಸ್ವಲ್ಪ ಹೊತ್ತಿನಲ್ಲೇ ನಿಧಾನರಾದರು ಎಂದು ಚಂದ್ರಾವತಿ ತಿಳಿಸಿದರು.