ವಿವಿಧ ಬೆಳೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರೈತರಿಗೆ ಸಲಹೆಗಳು
ದಾವಣಗೆರೆ: ಜಿಲ್ಲೆಯ ಮುಂಗಾರು ಹಂಗಾಮಿನ ಮಳೆ ಆಶ್ರಿತ ಪ್ರದೇಶದಲ್ಲಿ ಈಗಾಗಲೇ ವಿವಿಧ ಬೆಳೆಗಳ ಬಿತ್ತನೆಯಾಗಿದ್ದು, ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆ ಬರುತ್ತಿರುವುದರಿಂದ ಕೆಲವೊಂದು ಭಾಗದ ಜಮೀನಿನಲ್ಲಿ ನೀರು ನಿಲ್ಲುವಂತಹ ಕಡೆಗಳಲ್ಲಿ ಬೆಳೆಗಳಿಗೆ ಶೀತದ ಅಡ್ಡ ಪರಿಣಾಮಗಳು ಕಂಡು ಬರುತ್ತಿರುವ ಸಲುವಾಗಿ ರೈತರು ವಿವಿಧ ಬೆಳೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೀತದ ಪರಿಣಾಮ ಬೆಳೆ ಬಿಳಿಚಾಗುವುದು ಹಾಗೂ ಕ್ಯಾದಿಗೆ ರೋಗದ ತರಹದ ಲಕ್ಷಣಗಳು ಕಂಡು ಬಂದಲ್ಲಿ, ಜಮೀನಿನಲ್ಲಿ ನೀರು ಬಸಿದು ಹೋಗುವಂತೆ ನೀರಿನ ದಾರಿ ಕಲ್ಪಿಸುವುದು. ದಪ್ಪವಾಗಿ ಬಿತ್ತನೆಯಾದ ಕಡೆಗಳಲ್ಲಿ ಕನಿಷ್ಠ 8 ಅಂಗುಲ ಅಂತರ ಕಾಯ್ದುಕೊಳ್ಳಲು ಸಸಿಗಳನ್ನು ಕಿತ್ತು, ಎಡೆ ಹೊಡೆದು ಬೆಳೆ ಸಾಲುಗಳಿಗೆ ದಿಂಡು ಏರಿಸಬೇಕು.
ಮೆಕ್ಕೆಜೋಳ 30 ದಿವಸದ ಬೆಳೆಗೆ 10 ರಿಂದ 15 ಕೆಜಿ ಯೂರಿಯಾ ಮೇಲುಗೊಬ್ಬರ ಕೊಡಬಹುದು. ಶೀತ ಬಾಧೆಯಿಂದ ಬೇಗ ಚೇತರಿಸಿಕೊಳ್ಳಲು 3ಗ್ರಾಂ ನೀರಿನಲ್ಲಿ ಕರಗುವ ಸಾರಜನಕ:ರಂಜಕ:ಪೊಟ್ಯಾಷ್ (19:19:19 / 18:18:18) ಮತ್ತು 3 ಮಿಲೀ ಲಘು ಪೋಷಕಾಂಶ ದ್ರಾವಣವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
ಬಾರಿ ಮಳೆ ಹಾಗೂ ಬಿಸಿಲು ವಾತಾವರಣ ಇದ್ದಲ್ಲಿ ಶೇಂಗಾ ಬೆಳೆಯಲ್ಲಿ ಬುಡ ಕೊಳೆ ರೋಗ ಕಂಡು ಬರುತ್ತದೆ. ಅಲ್ಲಲ್ಲಿ ಗಿಡಗಳು ಬಾಡುವುದು ಕಂಡು ಬರುತ್ತದೆ. ಹತೋಟಿಗಾಗಿ 2ಗ್ರಾಂ. ಕಾರ್ಬನ್ ಡೇಜಿಂ ಪ್ರತೀ ಲೀಟರ್ ನೀರಿಗೆ ಬೆರೆಸಿ ದ್ರಾವಣವನ್ನು ರೋಗಪೀಡಿತ ಬೆಳೆಗಳ ಬುಡಕ್ಕೆ ಸುರಿಯಬೇಕು. ಶೇಂಗಾ ಬಿತ್ತುವಾಗ ಜಿಪ್ಸಂ ಹಾಕಿಲ್ಲದಿದ್ದಲ್ಲಿ, 30 ದಿನದೊಳಗಾಗಿ 2ಕ್ವಿಂಟಲ್ ಜಿಪ್ಸಂನ್ನು ಪ್ರತೀ ಎಕರೆಗೆ ಮಣ್ಣಿನಲ್ಲಿ ಬೆರೆಸಿ ಎಡೆ ಹೊಡೆದು ದಿಂಡು ಏರಿಸಬೇಕು.
ತೊಗರಿ ಬೆಳೆಯಲ್ಲಿ ನೀರು ನಿಲ್ಲದಂತೆ ಬಸಿದು ತೆಗೆಯಬೇಕು. ಇಲ್ಲದಿದ್ದಲ್ಲಿ ಸಿಡಿ ರೋಗ ಬರುವ ಸಾಧ್ಯತೆ ಇರುತ್ತದೆ. ಸಿಡಿ ರೋಗದ ಲಕ್ಷಣಗಳು (ಗಿಡ ಬಾಡಿದಂತೆ ಅಥವಾ ಒಣಗಿದಂತೆ ಕಾಣುತ್ತದೆ) ಇದ್ದಲ್ಲಿ ಸಿಡಿ ರೋಗ ಬಾಧಿತ ಒಣಗಿದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಮುನ್ನೆಚ್ಚರಿಕೆಯಾಗಿ ಇತರೆ ಪ್ರದೇಶಕ್ಕೆ ರೋಗ ಹರಡದಂತೆ 1ಗ್ರಾಂ. ಕಾರ್ಬನ್‍ಡೇಜಿಂ ಪ್ರತೀ ಲೀಟರಿಗೆ ಬೆರೆಸಿ ರೋಗ ಪೀಡಿತ ಪ್ರದೇಶ ನೆನೆಯುವಂತೆ ಸುರಿಯಬೇಕು.
ಹತ್ತಿ ಬೆಳೆಯಲ್ಲಿ ಸತತವಾಗಿ ಬರುವ ಜಿಟಿ ಜಿಟಿ ಮಳೆಯಿಂದ ಕರಿ ಹೇನು ಬಾಧೆ ಕಂಡು ಬಂದಲ್ಲಿ ಹತೋಟಿಗೆ ಒಂದು ಮಿಲೀ. ಅಸಿಟಮಿಪ್ರಿಡ್ 3ಲೀ. ನೀರಿಗೆ ಅಥವಾ ಒಂದು ಮಿಲೀ ಇಮಿಡಕ್ಲೋಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಮೇಲೆ ಚೆನ್ನಾಗಿ ಸಿಂಪಡಿಸಬೇಕು. ಜಮೀನಿನಲ್ಲಿ ನೀರು ನಿಲ್ಲದಂತೆ ಬಸಿದು ತೆಗೆಯಬೇಕು. ಶೀತ ಬಾಧೆಯಿಂದ ಎಲೆ ಕೆಂಪಾಗುವುದು ಕಂಡು ಬಂದಲ್ಲಿ, ಶೇ.2ರ ಡಿಎಪಿ ರಸಗೊಬ್ಬರದ ದ್ರಾವಣವನ್ನು (100 ಲೀ.ನೀರಿನಲ್ಲಿ 2ಕೆಜಿ ಡಿಎಪಿ ಚೆನ್ನಾಗಿ ಕರಗಿಸಿ ಒಂದು ರಾತ್ರಿ ಬಿಟ್ಟು, ಮೇಲಿನ ತಿಳಿ) ಪ್ರತೀ ಎಕರೆಗೆ 200 ಲೀ.ನಂತೆ ಬೆಳೆಗೆ ಸಿಂಪರಿಸಬೇಕು. ಬೆಳೆಯಲ್ಲಿ ಎಡೆ ಹೊಡೆದು ಸಾಲುಗಳಿಗೆ ದಿಂಡು ಏರಿಸಬೇಕು.
ಎಲ್ಲಾ ಬೆಳೆಗಳ ಬಿತ್ತನೆ ಕಾಲಕ್ಕೆ ಜಿಪ್ಸಂ, ಜಿಂಕ್, ಬೋರಾನ್ ನೀಡಿಲ್ಲದಿದ್ದರೆ, 30 ದಿವಸದೊಳಗಾಗಿ ಪ್ರತಿ ಎಕರೆಗೆ 1ಕ್ವಿಂಟಲ್ ಜಿಪ್ಸಂ, 5ಕೆಜಿ ಜಿಂಕ್ ಮತ್ತು 2ಕೆಜಿ ಬೋರಾನ್ ಪೋಷಕಾಂಶಗಳನ್ನು ಒದಗಿಸಿ ಎಡೆ ಹೊಡೆದು ಸಾಲುಗಳಿಗೆ ದಿಂಡು ಏರಿಸಿ, ಬದುಗಳನ್ನು ಸ್ವಚ್ಚಗೊಳಿಸಿ, ಕಳೆ ಮುಕ್ತವಾಗಿರಿಸಿದಲ್ಲಿ ಕೀಟ ರೋಗ ಬಾಧೆ ಕಡಿಮೆಯಾಗುತ್ತದೆ.
ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಘು ಪೋಷಕಾಂಶ ಮಿಶ್ರಣಗಳು ರೈತರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.