Ubdt; ಯುಬಿಡಿಟಿ ಶುಲ್ಕ ಕಡಿತ – ವಿದ್ಯಾರ್ಥಿ ಹೋರಾಟದ ಫಲಕ್ಕೆ ಜಯ.! 50% ಪೇಮೆಂಟ್ ಕೋಟಾ ರದ್ದಾಗುವವರೆಗೂ ಹೋರಾಟ

ದಾವಣಗೆರೆ: ubdt ಯುಬಿಡಿಟಿ ಕಾಲೇಜಿನ ಮೂರು ಮತ್ತು ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿಸಲ್ಪಟ್ಟಿದ್ದ ಶುಲ್ಕವನ್ನು ಎಐಡಿಎಸ್ಓ ಹಾಗೂ ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಯ ಫಲವಾಗಿ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ಸೆಪ್ಟೆಂಬರ್ 24ರಂದು ಕುವೆಂಪು ಕನ್ನಡ ಭವನದಲ್ಲಿ ನಡೆದ ‘ಯುಬಿಡಿಟಿ ಉಳಿಸಿ’ ವಿದ್ಯಾರ್ಥಿಗಳ ಪ್ರತಿಭಟನಾ ಸಮಾವೇಶದಲ್ಲಿ 50% ಪೇಮೆಂಟ್ ಕೋಟಾ ರದ್ದುಪಡಿಸುವಂತೆ ಹಾಗೂ ಶುಲ್ಕ ಹೆಚ್ಚಳವನ್ನು ಕೈಬಿಡುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.

ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದಾಗ ಎರಡು ದಿನದ ಕಾಲಾವಕಾಶವನ್ನು ಕೇಳಿದ್ದರು. ಅಂತಿಮವಾಗಿ, ಎಐಡಿಎಸ್ಓ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ ಹೋರಾಟದ ಫಲದಿಂದ ಶುಲ್ಕವನ್ನು ಕಡಿತಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. 33,510 ರೂಗೆ ಏರಿಸಲಾಗಿದ್ದ ಅಂತಿಮ ವರ್ಷದ ಶುಲ್ಕವನ್ನು 26,720 ರೂ.ಗೆ ಇಳಿಸಲಾಗಿದೆ. 34,510ರೂ.ಗೆ ಏರಿಸಲಾಗಿದ್ದ ಮೂರನೇ ವರ್ಷದ ಶುಲ್ಕವನ್ನು 30,530ರೂ.ಗೆ ಇಳಿಸಲಾಗಿದೆ. ವಿದ್ಯಾರ್ಥಿಗಳ ರಾಜಿರಹಿತ ಹೋರಾಟಕ್ಕೆ ಸಂದ ಜಯ ಇದಾಗಿದೆ.

 

ಆದರೆ ಯುಬಿಡಿಟಿ ಕಾಲೇಜನ್ನು ಸ್ವ-ಹಣಕಾಸು ಸಂಸ್ಥೆಯನ್ನಾಗಿಸಿ ಕ್ರಮೇಣ ಖಾಸಗೀಕರಣಗೊಳಿಸುವ ಹುನ್ನಾರದ ಭಾಗವಾದ 50% ಪೇಮೆಂಟ್ ಕೋಟಾ ಇನ್ನೂ ಕೂಡ ರದ್ದಾಗಿಲ್ಲ. ಈ ಬೇಡಿಕೆ ಈಡೇರುವವರೆಗೂ ಹೋರಾಡುವ ಸಂಕಲ್ಪ ತೊಟ್ಟಿರುವ ವಿದ್ಯಾರ್ಥಿಗಳು ‘ಯುಬಿಡಿಟಿ ಉಳಿಸಿ’ ಹೋರಾಟದ ಮುಂದುವರಿಕೆಯಾಗಿ ಇಂದು ನಗರದ ಕೆ ಆರ್ ಮಾರುಕಟ್ಟೆ, ಗಡಿಯಾರ ಕಂಬ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರಿಂದ ಸಹಿಸಂಗ್ರಹ ಮಾಡಿದರು.

ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವ್ಯಾಪಾರಿಗಳು, ರೈತರು ಹಾಗೂ ಸಾರ್ವಜನಿಕರು ಚಳುವಳಿಯನ್ನು ಬಲಪಡಿಸಲು ಸಹಿಯೊಂದಿಗೆ ದೇಣಿಗೆ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಐಡಿಎಸ್ಓನ ಜಿಲ್ಲಾ ಅಧ್ಯಕ್ಷರಾದ ಪೂಜಾ ನಂದಿಹಳ್ಳಿ ಮಾತನಾಡಿ, ರೈತರು, ಬೀದಿಬದಿ ವ್ಯಾಪಾರಸ್ಥರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನಗಳು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಅವರು ಅವಲಂಬಿತರಾಗಿರುವುದು ಸರ್ಕಾರಿ ಶಾಲಾ-ಕಾಲೇಜುಗಳ ಮೇಲೆ. ಹೀಗಿರುವಾಗ ಯುಬಿಡಿಟಿ ಕಾಲೇಜಿನಲ್ಲಿ ಜಾರಿಗೊಳಿಸಿರುವ 50% ಪೇಮೆಂಟ್ ಕೋಟಾದ ಮೂಲಕ ಈ ಎಲ್ಲ ಜನಸಾಮಾನ್ಯರ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ. ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಹಣವಂತರಿಗೆ ಮಾರಾಟ ಮಾರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್ ಮಾತನಾಡಿ, ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಮಣಿದು ಹೆಚ್ಚಿಸಲ್ಪಟ್ಟಿದ್ದ ಶುಲ್ಕವನ್ನು ಕಡಿತಗೊಳಿಸಲಾಗಿದೆ. ಆದರೆ ಬಡವರಿಗೆ ದ್ರೋಹ ಎಸಗಿ ಜಾರಿಗೊಳಿಸಿರುವ 50% ಪೇಮೆಂಟ್ ಕೋಟಾ ರದ್ದಾಗುವವರೆಗೂ, ವಿದ್ಯಾರ್ಥಿಗಳು ಐಕ್ಯತೆಯಿಂದ ಹೋರಾಟವನ್ನು ಮುಂದುವರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಮಹಾಂತೇಶ್ ಬೀಳೂರು, ಜಿಲ್ಲಾ ಉಪಾಧ್ಯಕ್ಷರಾದ ಕಾವ್ಯ ಬಿ ಸೇರಿದಂತೆ ಹೋರಾಟ ಸಮಿತಿ ಸದಸ್ಯರಾದ ಅಭಿಷೇಕ್, ಸಂತೋಷ್, ರಾಜಶೇಖರ್, ಚೇತನ್, ರೀಮಾ, ಆದರ್ಶ್, ಶಿವನಗೌಡ ಮುಂತಾದವರು ಭಾಗವಹಿಸಿದ್ದರು.

ಸುಮನ್ ಟಿ ಎಸ್
ಜಿಲ್ಲಾ ಕಾರ್ಯದರ್ಶಿ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!