ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಪರ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಉಮಾ ಪ್ರಕಾಶ್ , ದೂಡಾ ಅಧ್ಯಕ್ಷ ಎ. ವೈ. ಪ್ರಕಾಶ್ ಮತಯಾಚನೆ ಮಾಡಿದರು.
ನಿಟ್ಟುವಳ್ಳಿ ಚಿಕ್ಕನಹಳ್ಳಿ ಹೊಸ ಬಡಾವಣೆ 32 ನೇ ವಾರ್ಡ್ ನಲ್ಲಿ ಪ್ರಚಾರ ಕೈಗೊಂಡ ದಂಪತಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಬೇಕು. ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೇವೆ. ಎಲ್ಲಾ ಕಡೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಉಮಾ ಪ್ರಕಾಶ್ ಹಾಗೂ ಪ್ರಕಾಶ್ ಹೇಳಿದರು.
ಪ್ರಚಾರ ವೇಳೆ ಕ್ಯಾನ್ಸರ್ ಪೀಡಿತ ವೃದ್ಧೆಯೊಬ್ಬರು ಉಮಾ ಪ್ರಕಾಶ್ ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡರು. ಈ ವೇಳೆ ಉಮಾ ಪ್ರಕಾಶ್ ಅವರು ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತೇವೆ. ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಖುಷಿಗೊಂಡ ವೃದ್ಧೆ ಈ ಬಾರಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದರು.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಸೌಮ್ಯ ಸ್ವಭಾವದ, ಯುವಕರ ಮನ ಗೆಲ್ಲುತ್ತಿರುವ ಲೋಕಿಕೆರೆ ನಾಗರಾಜ್ ಅವರ ಪರವಾಗಿ ಒಲವು ವ್ಯಕ್ತವಾಗುತ್ತಿದೆ. ಹೋದಕಡೆಗಳಲ್ಲಿ ಮೋದಿ ಅವರ ಜನಪರ ಕಾರ್ಯಕ್ರಮಗಳು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸರ್ಕಾರ ನೀಡಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಲಾಢ್ಯವಾಗಿದ್ದು, ಇದು ಶ್ರೀಮಂತರು ಮತ್ತು ಸಾಮಾನ್ಯರ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಪ್ರಕಾಶ್ ಹೇಳಿದರು.
ಉಮಾ ಪ್ರಕಾಶ್ ಮಾತನಾಡಿ, ಬಿಜೆಪಿ ಪರವಾದ ಅಲೆ ಎಲ್ಲೆಡೆ ಕಂಡು ಬರುತ್ತಿದೆ. ಈ ವಾರ್ಡ್ ನಲ್ಲಿಯೂ ಹೋದಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಡು ಬಿಸಿಲಿನಲ್ಲಿ ಹೋಗುತ್ತಿದ್ದರೂ ಜನಸಾಮಾನ್ಯರು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇವೆ. ಈ ಬಾರಿಯ ಚುನಾವಣೆಯಲ್ಲಿ ಲೋಕಿಕೆರೆ ನಾಗರಾಜ್ ಅವರು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ತೊರೆದು ಹಲವರು ಬಿಜೆಪಿ ಸೇರುತ್ತಿದ್ದಾರೆ. ಇದು ಬದಲಾವಣೆಯ ಸಂಕೇತ. ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರವಾಗಿ ಜನರು ಇದ್ದಾರೆ ಎಂಬುದು ಕಂಡು ಬರುತ್ತಿದೆ. ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆ ಇದೆ ಎಂದು ಹೇಳಿದರು.
