ವಿದ್ಯಾರ್ಥಿಗಳಿಗೆ ಕೂಡಲೇ ಪಠ್ಯಪುಸ್ತಕ ವಿತರಣೆ, ಲಸಿಕೆ ನೀಡಿಕೆಗೆ ಎಐಎಸ್ಇಸಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಒತ್ತಾಯ

ದಾವಣಗೆರೆ: ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ನಂತರವೇ ಶಾಲಾ ಕಾಲೇಜುಗಳನ್ನು ತೆರೆಯಬೇಕು. ಶಾಲಾ-ಕಾಲೇಜುಗಳನ್ನು ತೆರೆಯುವುದು, ಬೋಧನೆ, ಕಲಿಕೆಯ ಬಗ್ಗೆ, ಮೌಲ್ಯಮಾಪನ ಹಾಗೂ ಪರೀಕ್ಷೆಗಳ ಬಗ್ಗೆ ಸರ್ಕಾರ ಈ ಕೂಡಲೇ ಪೋಷಕರ, ಶಿಕ್ಷಕರ ಮತ್ತು ಶಿಕ್ಷಣ ತಜ್ಞರ ಸಭೆ ನಡೆಸಿ, ಚರ್ಚಿಸಿ ಪ್ರಜಾತಾಂತ್ರಿಕವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಒತ್ತಾಯಿಸಿದೆ.
ಶೈಕ್ಷಣಿಕ ವರ್ಷ ಪ್ರಾರಂಭವಾದರೂ ರಾಜ್ಯ ಸರ್ಕಾರ ಇನ್ನು ಸಹ ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಲ್ಲ. ಮಕ್ಕಳಿಗೆ ಪಠ್ಯ ಪುಸ್ತಕ ನೀಡುವುದರಲ್ಲೂ ತನ್ನ ಕ್ರೌರ್ಯ ನಿರ್ಲಕ್ಷತೆಯನ್ನು ತೋರುತ್ತಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಶುರುವಾದರೂ, ಮಕ್ಕಳಿಗೆ ಇದುವರೆಗೂ ಪಠ್ಯಪುಸ್ತಕಗಳು ದೊರೆಯದಿರುವುದು ಖಂಡನಾರ್ಹ. ಮುಂದಿನ ತಿಂಗಳ ಕೊನೆಯವರೆಗೂ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುವ ಯಾವುದೇ ಸೂಚನೆ ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲಾ-ಕಾಲೇಜುಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಲಾಭವಾಗುವಂತೆ ಕೇವಲ ದಾಖಲಾತಿ ಮಾಡಿಕೊಳ್ಳುವುದು, ಪರೀಕ್ಷೆ ಮತ್ತು ಮೌಲ್ಯಮಾಪನ ಮಾಡುವುದು ಬಿಟ್ಟು, ಕಲಿಕೆ ಬೋಧನೆ ಬಗ್ಗೆ ಯಾವುದೇ ಆಸಕ್ತಿ ತೋರದಿರುವುದು ಕಳೆದ ಎರಡು ವರ್ಷದಿಂದ ಸಾಬೀತಾಗಿದೆ ಎಂದು ದೂರಿರುವ ಅವರು, ರಾಜ್ಯ ಸರ್ಕಾರ ಕೂಡಲೇ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.