ದಾವಣಗೆರೆ: ನಗರದ ಕೆಟಿಜೆ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬ್ರಿಡ್ಜ್, ಜಲಸಿರಿ ಯೋಜನೆ, ರಾಜಕಾಲುವೆ ಕಾಮಗಾರಿಯನ್ನು ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್ ಅವರು ಅಧಿಕಾರಿಗಳ ಜೊತೆ ತೆರಳಿ ವೀಕ್ಷಿಸಿದರು.
ಡಾಂಗೆ ಪಾರ್ಕ್ ಹಾಗೂ ಆಂಜನೇಯ ಸ್ವಾಮಿ ಸಮೀಪದಲ್ಲಿ ಬ್ರಿಡ್ಜ್ ಅಥವಾ ಕಲ್ಲು ಒಡ್ಡು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಶಾಲೆಗಳಿಗೆ ಹೋಗಲು, ಬೈಕ್, ಸಾಮಾನ್ಯ ಜನರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ವಿನಾಯಕ್ ಪೈಲ್ವಾನ್ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು. ಯಾವುದೇ ಕಾರಣಕ್ಕೂ ಜನರಿಂದ ದೂರು ಬರಬಾರದು. ನೀವು ತೆಗೆದುಕೊಂಡಿರುವ ಸಮಯದೊಳಗೆ ಕೆಲಸ ಮುಗಿಸಬೇಕು. ಜನರು ಎಂದಿನಂತೆ ಓಡಾಡಲು ಆದಷ್ಟು ಬೇಗ ಶ್ರಮ ವಹಿಸಿ ಬ್ರಿಡ್ಜ್ ನಿರ್ಮಾಣ ಮಾಡಬೇಕು. ಜನರಿಂದ ತುಂಬಾ ತೊಂದರೆಯಾಗುತ್ತಿದೆ ಎಂಬ ದೂರುಗಳು ಈಗಾಗಲೇ ಸಾಕಷ್ಟು ಬಂದಿವೆ. ನೆಪ ಹೇಳುವುದನ್ನು ಬಿಟ್ಟು ಜನರಿಗಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ನಿಟುವಳ್ಳಿ ಹಾಗೂ ಭಗತ್ ಸಿಂಗ್ ನಗರಕ್ಕೂ ಭೇಟಿ ನೀಡಿದ ಮೇಯರ್ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು, ಜಲಸಿರಿ ಯೋಜನೆ ಹಾಗೂ ರಾಜಕಾಲುವೆ ಕಾಮಗಾರಿಗಳನ್ನೂ ಸಹ ವೀಕ್ಷಿಸಿದರು. ಮೇಯರ್ ಅವರು, ಜಲಸಿರಿ ಯೋಜನೆ ಶುರುವಾಗಿ ಕೆಲ ವರ್ಷಗಳೇ ಉರುಳಿದವು. ಇನ್ನೂ ಕಾಮಗಾರಿ ಮುಗಿದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸುವ ಕೆಲಸ ಮಾಡಿ. ರಾಜಕಾಲುವೆ ಒತ್ತುವರಿ ತೆರವು, ಈಗ ತೆಗೆದುಕೊಂಡಿರುವ ಕಾಮಗಾರಿಗಳನ್ನು ಆದ್ಯತಾನುಸಾರ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಪಾಲಿಕೆಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಮನೋಹರ್ ಮಾತನಾಡಿ, ಕೆಟಿಜೆ ನಗರದಲ್ಲಿ ಕೈಗೊಳ್ಳಲಾಗಿರುವ ಬ್ರಿಡ್ಜ್ ಬೇಗನೇ ಮುಗಿಯುತಿತ್ತು. ವಿಧಾನಸಭೆ ಚುನಾವಣೆ ಬಂದ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಕೆಲಸ ಆರಂಭಿಸಲಾಗಿದೆ. ಬ್ರಿಡ್ಜ್ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಸ್ಲ್ಯಾಬ್ ಹಾಕಬೇಕು. ಇನ್ನು 15 ರಿಂದ 20 ದಿನಗಳೊಳಗೆ ಪೂರ್ಣಗೊಳಿಸಿ ಜನರ ಸೇವೆಗೆ ಅನುವು ಮಾಡಿಕೊಡಲಾಗುವುದು. ಭಗತ್ ಸಿಂಗ್ ನಗರದ ರಾಜಕಾಲುವೆ, ಬ್ರಿಡ್ಜ್ ನಿರ್ಮಾಣ ಸೇರಿದಂತೆ ಒಟ್ಟು 1. 50 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಬ್ರಿಡ್ಜ್ ನಿರ್ಮಾಣದ ಸಮೀಪ ಕಸ, ಕಡ್ಡಿ, ತ್ಯಾಜ್ಯ ಇದ್ದು,ಅದನ್ನು ತೆರವುಗೊಳಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಜಲಸಿರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯೂ ವೇಗ ಪಡೆದಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಲಸಿರಿ ಯೋಜನೆಯ ಇಂಜಿನಿಯರ್ ಶಿವಕುಮಾರ್, ಪಾಲಿಕೆಯ ಮಾಜಿ ಉಪ ಮಹಾಪೌರರಾದ ದ್ಯಾಮಪ್ಪ ಮತ್ತಿತರರು ಹಾಜರಿದ್ದರು.
