ಕೊರಗರ ಮೇಲೆ ನಡೆದಿರುವ ದೌರ್ಜನ್ಯ ತೀವ್ರ ಬೇಸರವಾಗಿದೆ: ಅದಕ್ಕೆ ಪೊಲೀಸರು ತಕ್ಕ ಬೆಲೆ ತೆರಲೇಬೇಕು – ಗೃಹ ಸಚಿವ ಅರಗ ಜ್ಞಾನೇಂದ್ರ
ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದ ಚಿಟ್ಟೆಬೆಟ್ಟು ಕೊರಗರ ಕಾಲೋನಿಯಲ್ಲಿ ಕೊರಗರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರವನ್ನು ಸಿಓಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಕೊಟತಟ್ಟು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕಳೆದ ಡಿ.27ರ ರಾತ್ರಿ ಜರುಗಿದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಸಮುದಾಯದ ಯುವಕರ ವಿರುದ್ದ ದಾಖಲಾದ ಸುಳ್ಳು ದೂರಿನ ಪ್ರಕರಣದ ಸಮಗ್ರ ತನಿಖೆ ಸಿಓಡಿಗೆ ವಹಿಸಲಾಗಿದೆ ಎಂದು ಹೇಳಿದರು.
ಮದುಮಗ ಮತ್ತು ಮನೆಯ ಹೆಣ್ಣು ಮಕ್ಕಳ ಮೇಲೆ ಪೊಲೀಸರು ಲಾಠಿ ಬೀಸಿರುವುದು ಅತಿರೇಕ ಕ್ರಮವಾಗಿದ್ದು, ಹಲ್ಲೆ ನಡೆಸಿದ ಪಿಎಸ್‌ಐ ಅಮಾನತು ಮಾಡಲಾಗಿದ್ದು, ದಾಳಿಯಲ್ಲಿದ್ದ ಪೊಲೀಸರನ್ನು ವರ್ಗಾಯಿಸಲಾಗಿದೆ. ಇವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯವಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಈ ಪ್ರಕರಣದಿಂದ ತೀವ್ರ ಬೇಸರವಾಗಿದೆ. ಅದಕ್ಕೆ ಪೊಲೀಸರು ತಕ್ಕ ಬೆಲೆ ತೆರಲೇಬೇಕು. ಗಾಯಾಳುಗಳಿಗೆ ತಲಾ 2ಲಕ್ಷ ಪರಿಹಾರ ನೀಡಲಾಗುತ್ತಿದ್ದು, ತಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 50 ರು., ವಿತರಿಸಲಾಗುತ್ತಿದೆ ಎಂದರು.