ಕೊನೆ ಭಾಗಕ್ಕೆ ತಲುಪದ ನೀರು: ಭದ್ರಾ ಅಚ್ಚುಕಟ್ಟು ರೈತರ ಪ್ರತಿಭಟನೆ

ಭದ್ರಾ ಅಚ್ಚುಕಟ್ಟು ರೈತರ ಪ್ರತಿಭಟನೆ
ಮಲೇಬೆನ್ನೂರು: ಭದ್ರಾ ಜಲಾಶಯ ಭರ್ತಿಯಾಗಿದೆ, ಸರಿಯಾದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಆದರೆ ಕೊನೆಯ ಭಾಗದ ರೈತರ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ ಎಂದರೆ ನೀರು ಎಲ್ಲಿ ಹೋಗುತ್ತಿದೆ? ಎಂದು ಅಚ್ಚುಕಟ್ಟು ಕೊನೆಯ ಭಾಗದ ರೈತರು ಅಧಿಕಾರಿಗಳ ವಿರುದ್ಧ ಹರಿಯಾದ್ದಿದ್ದಾರೆ.
ಆಂತರಿಕ ಸರದಿ ರೂಪಿಸಿ ನಾಲೆಗೆ ನೀರು ಬಿಟ್ಟಿದ್ದರೂ ಕೊನೆಯ ಭಾಗ ತಲುಪುತ್ತಿಲ್ಲ. ನಿಯಂತ್ರಣ 2ಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಸಸಿ ಮಡಿ ಬಲಿತಿವೆ. ಈಗ ಭತ್ತದ ನಾಟಿ ಮಾಡದಿದ್ದರೆ ಪ್ರಯೋಜನವಿಲ್ಲ. ಸಾವಿರಾರು ರೂಪಾಯಿ ನಷ್ಟವಾಗುತ್ತದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಸನ, ಭಾನುವಳ್ಳಿ, ಕಾಮಾಲಪುರ ಭಾಗದಲ್ಲಿ ನಾಲೆ ನೀರಿನ ಸಮಸ್ಯೆ ಇದೆ. ನಾಲೆಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ದೂರಿರುವ ರೈತರು, ಪಟ್ಟಣದ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿ ಎದುರು ಮಂಗಳವಾರ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರು ನಾಲೆ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ ಘಟನಾ ಸ್ಥಳಕ್ಕೆ ಬಂದು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ತಿಳಿದುಕೊಂಡರು. ಆದರೆ ಇಇ ಹಾಗೂ ಕೆಲವು ಎಂಜಿನಿಯರ್‌ಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಗೊತ್ತಾಯಿತು. ಡಿಸಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನೀರಿನ ಸಮಸ್ಯೆ ವಿವರಿಸಿದರು. ನೀರಾವರಿ ನಿಗಮದ ಸಿಬ್ಬಂದಿಗೆ ಚುನಾವಣೆ ಕೆಲಸದಿಂದ ರಿಯಾಯಿತಿ ನೀಡುವಂತೆ ಉಭಯ ನಾಯಕರು ಕೋರಿದರು. ಜಿಲ್ಲಾಧಿಕಾರಿಗಳು ಸಮ್ಮತಿ ನೀಡಿದರು.
ಒಂದೆರೆಡು ದಿನಗಳಲ್ಲಿ ಪರಿಸ್ಥಿತಿ ಸರಿಯಾಗದಿದ್ದಲ್ಲಿ ಪೊಲೀಸ್ ಭದ್ರತೆಯಲ್ಲಿ ನೀರು ಹರಿಸುವಂತೆ ಧರಣಿ ನಿರತರು ಒತ್ತಾಯಿಸಿದ್ದು, ನೀರು ಬರದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರೈತರಾದ ಚಂದ್ರಪ್ಪ, ಪ್ರಶಾಂತ್, ಅಶೊಕ್, ತಿಪ್ಪಣ್ಣ, ಕುಬೇರಗೌಡ, ರವಿಕುಮಾರ್, ಗುತ್ಯಪ್ಪ, ತಿಪ್ಪೇರುದ್ರಪ್ಪ ದೊಡ್ಡಬಸಪ್ಪ, ಷಣ್ಮುಖಪ್ಪ ಹಾಗೂ ಹೆಚ್ಚಿನ ಸಂಖ್ಯೆಯ ರೈತರು ಇದ್ದರು