ಆಡಳಿತದಲ್ಲೇಕೆ ಧರ್ಮಗಳ ಪಾತ್ರ? ಸಂವಿಧಾನ ದೇಶದ ಪ್ರಜೆಗಳಿಗೆ ಸಮಾನತೆ ಸಿಗುವಂತೆ ಮಾಡುವ ಒಂದು ಶ್ರೇಷ್ಟ ಗ್ರಂಥ!
ದಾವಣಗೆರೆ : ಧರ್ಮ ಎಂಬುದು ಪ್ರಾಚೀನ ಕಾಲದಿಂದ ನಾವು ಅನುಸರಿಸುತ್ತಾ ಬಂದಿರುವ ಒಂದು ನಂಬಿಕೆ. ರಾಜ-ಮಹಾರಾಜರ ಕಾಲದಲ್ಲಿ ಧರ್ಮವೇ ರಾಜನನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತಿತ್ತು. ಅದಕ್ಕಾಗಿ, ಒಬ್ಬ ಆಸ್ತಾನ ಪುರೋಹಿತನ ನೇಮಕ ಮಾಡುತ್ತಿದ್ದರು. ಅವನು, ರಾಜನಿಗೆ ಧರ್ಮದಿಂದ ಪ್ರಜೆಗಳನ್ನು ನಡೆಸಿಕೊಳ್ಳಲು, ಎಲ್ಲಾ ರೀತಿಯ ಸಲಹೆಗಳನ್ನು ಕೊಡುತ್ತಿದ್ದ. ಚಾಣಕ್ಯ ಒಂದು ಕಡೆ ಹೀಗೆ ಹೇಳುತ್ತಾನೆ “ ರಾಜ್ಯದಲ್ಲಿ ಅನ್ಯಾಯವಾದರೆ, ಅದಕ್ಕೆ ರಾಜ ಕಾರಣ, ರಾಜ ಅನ್ಯಾಯ ಮಾಡಿದರೆ, ರಾಜ ಪುರೋಹಿತ ಕಾರಣ, ಹೆಂಡತಿ ತಪ್ಪು ಮಾಡಿದರೆ, ಗಂಡ ಕಾರಣ, ಶಿಷ್ಯ ತಪ್ಪು ಮಾಡಿದರೆ, ಗುರು ಕಾರಣ. ಅಂದರೆ, ಆ ಸಮಯದಲ್ಲಿ ಬರೆದಿಟ್ಟ ಸಂವಿಧಾನವಾಗಲಿ ಅಥವಾ ಕಾನೂನು ವ್ಯವಸ್ಥೆ ಇಲ್ಲದಿರುವ ಕಾರಣ, ಧರ್ಮ ಗ್ರಂಥಗಳಲ್ಲಿ ಉಲ್ಲೇಖ ಇದ್ದ ವಿಷಯದ ಮೇಲೆ ನಿರ್ಧಾರ ಮಾಡಲಾಗುತ್ತಿತ್ತು. ಅದು ಕೂಡಾ, ರಾಜನ ಮನಸ್ತಿತಿಯ ಮೇಲೆ ನಿರ್ಧಾರ ಆಗುತ್ತಿತ್ತು. ಆಗ, ಕೇವಲ, ರಾಜ ಹಾಗು ಸರ್ವಾಧಿಕಾರದ ಸರಕಾರಗಳು ಇದ್ದವು.
ಆದರೆ, ಕಳೆದ 200 ವರ್ಷದಿಂದ, ಆಡಳಿತ ವ್ಯವಸ್ಥೆಯಲ್ಲಿ ಎಷ್ಟೋ ಸಂಶೋಧನೆಗಳು ನಡೆದು, ಪ್ರಜಾಪ್ರಭುತ್ವ, ವಾಮ ಪಂಕ್ತಿ, ಮೊನಾರ್ಕ್, ಇತ್ಯಾದಿಗಳ ಆವಿಷ್ಕಾರ ಆಯಿತು. ಬ್ರಿಟೀಷರಿಂದ ಭಾರತವು ಸ್ವಾತಂತ್ರ ಪಡೆದುಕೊಂಡಾಗ ನಮ್ಮ ಪೂರ್ವಜರು, ಭಾರತದಲ್ಲಿ ಪ್ರಜಾಪ್ರಭುತ್ವದ ಆಡಳಿತ ವಿಧಾನವು ಸೂಕ್ತ ಎಂದು, ಅದರ ಅಧ್ಯಯನ ಮಾಡಿ, ಬೇರೆ- ಬೇರೆ ದೇಶಗಳಲ್ಲಿ ಆಗಲೇ ನೆಲೆಯಾಗಿರುವ, ಪ್ರಜಾಪ್ರಭುತ್ವದ ಮಾದರಿಯನ್ನು ಕೂಲಂಕುಷವಾಗಿ ವಿಮರ್ಶೆ ಮಾಡಿ, ಭಾರತದ ಪ್ರಜೆಗಳಿಗೆ ಸೂಕ್ತ ಹಾಗು ಎಲ್ಲರಿಗೂ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಹಾಗು ವ್ಯಕ್ತಿ ಸ್ವಾತಂತ್ರ ಸಿಗುವಂತೆ, ನಮ್ಮ ಸಂವಿಧಾನವನ್ನು ಬರೆದವರು. ಬರೆದವರು ಆಗಲೇ ನಡೆಯುತ್ತಿರುವ ಪ್ರಜಾಪ್ರಭುತ್ವದ ದೇಶದಿಂದ ಉನ್ನತ ಶಿಕ್ಷಣ ಪಡೆದವರು ಹಾಗು ಸಾಹಿತ್ಯ, ಅರ್ಥ ವ್ಯವಸ್ಥೆ, ಕಾನೂನು ವ್ಯವಸ್ಥೆ ಹಾಗು ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ವ್ಯಕ್ತಿಗಳಾಗಿದ್ದರು. ಅದು ಕೂಡಾ 75 ವರ್ಷದ ಮೊದಲು. ಆವಾಗ ಬಹುಶ ಪದವೀಧರ ಆಗುವುದೇ ದೊಡ್ಡ ವಿಷಯ ಆಗಿತ್ತು.
ಆದ್ದರಿಂದ, ದೇಶವು ಕೂಲಂಕುಷವಾಗಿ, ಮನುಷ್ಯನ ಪ್ರತಿಯೊಂದು ಆಗು-ಹೋಗುಗಳಿಗೆ ಬೇಕಾದ ವ್ಯವಸ್ಥೆಯನ್ನು ಒಳಗೊಂಡ ಸಂವಿಧಾನವನ್ನು ಬರೆದು, ಪ್ರಜೆಗಳಿಗೆ ಅರ್ಪಿಸಲಾಯಿತು. ಇದರಿಂದಲೇ, ಆಡಳಿತ ನಡೆಸಲು ನಿರ್ಧಾರ ಮಾಡಲಾಯಿತು. ಕೇವಲ ಭಾರತವಲ್ಲ, ಎಲ್ಲಾ ದೇಶಗಳು ಇಂತಹ ಸಂವಿಧಾನವನ್ನು ಅಳವಡಿಸಿಕೊಂಡಿತು. ಕಾಲ-ಕಾಲಕ್ಕೆ ಸರಿಯಾಗಿ, ಅದರಲ್ಲಿ ಸಣ್ಣ-ಪುಟ್ಟ ಬದಲಾವಣೆಗೂ ಅವಕಾಶ ಮಾಡಿ ಕೊಡಲಾಯಿತು.ಆದ್ದರಿಂದ ದೇಶದ-ರಾಜ್ಯದ ಆಡಳಿತವು, ಸಂವಿಧಾನದಂತೆ ನಡೆಯಲ್ಪಡುವುದು. ಎಲ್ಲಾ ಆಡಳಿತ ಪ್ರಕ್ರಿಯೆ ಹಾಗು ಪ್ರಜೆಗಳ ಶಿಸ್ತು-ನಿಯಮಗಳು ಸಂವಿಧಾನದಂತೆ ನಡೆಯಲ್ಪಡುತ್ತಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಧರ್ಮಗಳ ಆಚರಣೆ ಹಾಗು ಸ್ವಾತಂತ್ರಗಳಿಗೆ, ಯಾವುದೇ ದಕ್ಕೆ ಬಾರದಂತೆ, ಅವುಗಳನ್ನು ನಂಬುವ, ಅನುಸರಿಸುವ ಪ್ರಜೆಗಳಿಗೆ, ಅವುಗಳನ್ನು ಆಚರಿಸುವ ಸ್ವಾತಂತ್ರವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಮೂಲಕ ಕೊಡಲಾಯಿತು. ಆದರೆ, ಆಡಳಿತದಲ್ಲಿ ಖಂಡಿತಾ ಧರ್ಮಗಳ ಪಾತ್ರ ಇರಬಾರದು. ಸಂವಿಧಾನವು, ಒಂದು ದೇಶದ ಪ್ರಜೆಗಳಿಗೆ ಸಮಾನತೆ ಸಿಗುವಂತೆ ಮಾಡುವ ಒಂದು ಶ್ರೇಷ್ಟ ಗ್ರಂಥ. ಎಲ್ಲಾ ಧರ್ಮ, ಜಾತಿ, ಪಂಗಡ, ಸಂಸ್ಕೃತಿ ಹಾಗು ಭಾಷೆಯ ಪ್ರಜೆಗಳು ಸಮಾನವಾಗಿ, ಸಮಾನ ಅವಕಾಶ ಸಿಕ್ಕಿ, ಶಾಂತಿ-ಸೌಹಾರ್ದತೆಯಿಂದ ಬದುಕಿದಾಗ, ಆ ದೇಶ-ರಾಜ್ಯ ಸಮೃಧ್ಧ ಆಗುವುದು. ಯಾವಾಗ, ಧರ್ಮ, ಜಾತಿ, ಪಂಗಡ, ಸಂಸ್ಕತಿ ಹಾಗು ಭಾಷೆ ಆಡಳಿತದಲ್ಲಿ ತೊಡಗಿಸಿದಾಗ, ಅಲ್ಲಿ ಅರಾಜಕತೆ ತಾಂಡವ ಆಡುವುದು. ಪ್ರಜೆಗಳು ಒಬ್ಬರನ್ನೊಬ್ಬರು ವಿಂಗಡಿಸಲ್ಪಟ್ಟು, ಮೇಳು-ಕೀಳೆಂಬ ಭಾವನೆಗಳು ಉಧ್ಭವವಾಗಿ, ದ್ವೇಷದ ಭಾವನೆ ಬರುವುದು.
ಇವತ್ತು ಶೀಯಾ ಮುಸಲ್ಮಾನರ ದೇಶವಾದ ಇರಾನ್, ಉಳಿದ ಸುನ್ನಿ ಮುಸಲ್ಮಾನರ ದೇಶದೊಂದಿಗೆ ವೈರತ್ವ ಹೊಂದಿದೆ. ಹಾಗೆ ಇವುಗಳಿಂದ ಯೆಮೆನ್ ದೇಶ ಸರ್ವ ನಾಶ ಆಗುತ್ತಿರುವುದು. ಒಂದು ಕಡೆ ಸೌಧಿ ಅರೇಬಿಯಾ ಬೆಂಬಲ ತೋರಿಸಿದರೆ, ಇನ್ನೊಂದು ಕಡೆ ಇರಾನ್ ಬೆಂಬಲ ಕೊಟ್ಟು, ಯೆಮೆನ್ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಹೀಗೆ, ಎಲ್ಲಿ ಧರ್ಮಗಳು ಆಡಳಿತದ ಭಾಗವಾಗುವುದೋ, ಅಲ್ಲಿ ಸರ್ವನಾಶ ಆಗುವುದು ಖಂಡಿತಾ. ಧರ್ಮದ, ಜಾತಿ, ಪಂಗಡ, ಸಂಸ್ಕçತಿ ಹಾಗು ಭಾಷೆಗಳು ಆಡಳಿತದಲ್ಲಿ ಪ್ರವೇಶ ವಾದಾಗ, ಆದೇಶಗಳು ಅರಾಜಕತೆಯ ಗೂಡಾಗುವುದು ಎಂದು, ಪ್ರಪಂಚದಲ್ಲಿ ಹತ್ತಾರು ಉದಾಹರಣೆಗಳಿವೆ. ಆದ್ದರಿಂದ ಅಬಿವೃಧ್ಧಿ ಹೊಂದಿದ ದೇಶಗಳು, ಕೆಲವೊಂದು ವರ್ಷದ ಮೊದಲೆ, ಧರ್ಮವನ್ನು ಆಡಳಿತದಿಂದ ದೂರ ಇಟ್ಟರು.
ಪ್ರಜಾಪ್ರಭುತ್ವದಲ್ಲಿ, ಪ್ರತಿನಿಧಿಗಳನ್ನು, ಪ್ರಜೆಗಳು ಆರಿಸುವುದು. ಯಾವುದೇ ಧರ್ಮ-ಜಾತಿ ಅಲ್ಲ. ಪ್ರತಿಯೊಬ್ಬನಿಗೂ ಮತಧಾನದ ಹಕ್ಕು, ಅವನು ಈ ದೇಶದ ಪ್ರಜೆಯೆಂದು ಕೊಡಲಾಗಿದೆ. ಯಾವುದೇ ಧರ್ಮ-ಜಾತಿಯವನೆಂದಲ್ಲ. ರಾಜಕಾರಣಿಗಳು ಒಂದು ಧರ್ಮ-ಜಾತಿಯ ಮತವನ್ನು ಒಂದು ಕಡೆ ಕೇಂದ್ರಿಕರಿಸಲು, ಧರ್ಮ -ಜಾತಿ ಎಂದು ಪ್ರಜೆಗಳನ್ನು ಕೆರಳಿಸುವ ಕಾರ್ಯ ಮಾಡುತ್ತಿರುವರು. ಇದು ಪ್ರಜಾಪ್ರಭುತ್ವವನ್ನು ದಾರಿ ತಪ್ಪಿಸುವ ವಿಧಾನ ಹಾಗು ಸಮಾಜದಲ್ಲಿ ಅರಾಜಕತೆಯನ್ನು ನಿರ್ಮಿಸುವುದು.ಶಾಂತಿ, ಸಮೃಧ್ಧ, ಅಭಿವೃಧ್ಧಿ ಹಾಗು ನ್ಯಾಯ ಬದ್ದವಾದ ದೇಶ -ರಾಜ್ಯ ಆಗಬೇಕಾದರೆ, ಧರ್ಮ, ಜಾತಿ, ಪಂಗಡ ಹಾಗು ಸಂಸ್ಕçತಿ, ಆಡಳಿತದಲ್ಲಿ ಖಂಡಿತಾ ಬರಬಾರದು.
ಮಾನವ ಕುಲಕ್ಕೆ ಒಳ್ಳೆಯದಾಗಲಿ.