ಸಿಟಿ ರವಿ ಹೇಳಿದಾಕ್ಷಣ ನಾನು ಮುಸ್ಲಿಂ ಆಗಿಬಿಡ್ತಿನಾ?- ಸಿದ್ದರಾಮಯ್ಯ ಪ್ರಶ್ನೆ
ವಿಜಯಪುರ: ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಂ ಆಗಿಬಿತಡ್ತೀನಾ? ಎಂದು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.
ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು, ನಾನೂ ಹಿಂದು. ನಮ್ಮಪ್ಪನೂ ಹಿಂದು. ಅದಕ್ಕಾಕಿಯೇ ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ ಎಂದರು.
ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ. ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ. ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದ ಸಿದ್ದರಾಮಯ್ಯ, ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಬಡವರಿಗೆ ನೀಡಲಾಗುತ್ತಿದ್ದ 7 ಕೆ. ಜಿ. ಅಕ್ಕಿಯ ಪ್ರಮಾಣವನ್ನು ಈಗ 5 ಕೆ. ಜಿ. ಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರಕಾರದ್ದು. ಚೀಲ ಮಾತ್ರ ಕಾಂಗ್ರೆಸ್ಸಿನದ್ದು ಎನ್ನುವ ಬಿಜೆಪಿಯವರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸಾಂನಲ್ಲಿ ಏಕೆ ಅಕ್ಕಿಯನ್ನು ಕೊಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಅಮೀತಾ ಶಾ, ಜೆ. ಪಿ. ನಡ್ಡಾ, ಮೋದಿ ಯಾರೇ ಬರಲಿ, ಮತದಾರರು ಮಾತ್ರ ಕಾಂಗ್ರೆಸ್ಸಿಗೆ ಮತ್ತೇ ಆಶೀರ್ವಾದ ಮಾಡಬೇಕು ಎಂದು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ರಾಷ್ಟ್ರೀಯ ನಾಯಕರು ಎಷ್ಟು ಸಾರಿ ಬಂದರೂ ಬಿಜೆಪಿಗೆ ಏನೂ ಪ್ರಯೋಜನವಾಗದು ಎಂದರು.
ಬೆಳಗಾವಿ ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟರ್ ಓಪನ್ ಮಾಡಬಾರದಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು.
ಕನ್ನಡ ಭಾಷೆ, ಜಲ, ನೆಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು. ಅಲ್ಲದೇ, ಕೇಸ್ ಹಾಕಿದ್ದರೆ ತಕ್ಷಣವೇ ಕೇಸ್ ವಾಪಾಸ್ ಪಡೆಯಬೇಕು. ಕೂಡಲೇ ರೌಡಿಶೀಟರ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು. ಅದನ್ನು ಉಳಿಸಬೇಕಾಗಿರುವುದು ನಮ್ಮ ಸಂವಿಧಾನಿಕ ಹಕ್ಕು. ಒಕ್ಕೂಟ ವ್ಯವಸ್ಥೆ ಇರೋದ್ಯಾಕೆ? ಮಹಾರಾಷ್ಟ್ರದವರೂ ನಮ್ಮ ಭಾರತೀಯರೆ. ಹಾಗಂತ ಏನು ಮಾಡಿದರೂ ನಡೆಯೊಲ್ಲ. ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಮಹಾಜನ್ ಆಯೋಗದ ವರದಿಯಲ್ಲಿ ತೀರ್ಮಾನ ಆಗಿಲ್ವಾ? ಎಂದು ಎಸ್. ಸಿದ್ಧರಾಮಯ್ಯ ಪ್ರಶ್ನಿಸಿದರು.