ಹಣ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ ಹೋಟೆಲ್ ಮಾಲಿಕ – ಹಲ್ಲೆಯ ವಿಡಿಯೋ ವೈರಲ್ ಮಾಡಿದ ಕಾರ್ಮಿಕರು
ದಾವಣಗೆರೆ: ಶಾಮನೂರು ರಸ್ತೆಯಲ್ಲಿರುವ ಹೋಟೆಲ್ ಮತ್ತು ಲಾಡ್ಜ್ ಮಾಲೀಕ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದು, ಹೋಟೆಲ್‌ನ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕೆಂದು ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಟೆಲ್ ಮಾಲೀಕ ಸತತ ಮೂರು ವರ್ಷಗಳಿಂದ ಇಬ್ಬರು ಕಾರ್ಮಿಕರಿಗೆ ವೇತನ ನೀಡದೆ ದುಡಿಸಿಕೊಂಡಿದ್ದು, ಹೊರ ರಾಜ್ಯದ ನಾಲ್ವರು ಅಡುಗೆ ಸಹಾಯಕರನ್ನು ಮೂರು ತಿಂಗಳ ಕಾಲ ಬಿಡಿಗಾಸು ನೀಡದೆ ದುಡಿಸಿಕೊಂಡಿದ್ದಾರೆ. ಮಾಲೀಕನ ಹುಟ್ಟುಹಬ್ಬದ ನಿಮಿತ್ತ ಹಣ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಶಾಮನೂರು ರಸ್ತೆಯಲ್ಲಿ ಕೇವಲ ಬೇಸ್ಮೆಂಟ್ ಸೇರಿ ೪ಮಹಡಿಗಳನ್ನು ನಿರ್ಮಿಸಲು ಅನುಮತಿ ಪಡೆದಿರುವ ಈ ವ್ಯಕ್ತಿ, ಆರಕ್ಕೂ ಹೆಚ್ಚು ಅಂತಸ್ತುಗಳನ್ನು ನಿರ್ಮಿಸಿದ್ದಾರೆ. ಕಾನೂನಿನ ಪ್ರಕಾರ ಯಾವುದೇ ಸೆಟ್ ಬ್ಯಾಕ್ ಬಿಟ್ಟಿಲ್ಲ. ೧೦ಕೋಟಿ ಮೌಲ್ಯದಲ್ಲಿ ಕಟ್ಟುತ್ತಿರುವ ಈ ಬಿಲ್ಡಿಂಗಿಗೆ ಸೆಸ್ ರೂಪದಲ್ಲಿ ಕಾರ್ಮಿಕ ಕಲ್ಯಾಣ ನಿಧಿಗೆ ೧೦ಲಕ್ಷ ರೂ ಗಳನ್ನು ಕಟ್ಟಬೇಕು. ಆದರೆ, ಕೇವಲ ಇಪ್ಪತ್ತೆಂಟು ಸಾವಿರ ರು., ಗಳನ್ನು ಪಾವತಿ ಮಾಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಲ್ಲದೇ ಕಾರ್ಮಿಕ ಇಲಾಖೆಗೂ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಈ ರೀತಿ ಶ್ರಮಿಕರ ಸದ್ಬಳಕೆಗೆ ತುಂಬಬೇಕಾದ ಹಣವನ್ನು ತುಂಬದೆ ವಂಚಿಸಿರುವ ಕಟ್ಟಡದ ಮಾಲೀಕ ಆರ್.ಜಿ. ಬದ್ರಿನಾಥ್ ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ ಅವರು, ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಈತನ ವಿರುದ್ಧ ಪೊಲೀಸ್ ಇಲಾಖೆ ಹೊಟೇಲ್ ಮಾಲೀಕನ ವಿರುದ್ಧ ೧೫ದಿನದಲ್ಲಿ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಜರುಗಿಸಬೇಕು. ಇಲ್ಲವಾದಲ್ಲಿ ಹೋಟೆಲ್ ಮುಂದೆ ಧರಣಿ ನಡೆಸಲಾಗುವುದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜೇಶ್, ವೀರೇಶ್ ಇದ್ದರು.