ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಿದ್ದತೆಗೆ ಸೂಚನೆ
ದಾವಣಗೆರೆ : ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಯೋಜಿಸಲು ವ್ಯವಸ್ಥಿತವಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಹಮ್ಮಿಕೊಳ್ಳಬೇಕು. ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಥ ಸೇರಿದಂತೆ ಬಾಲ ಕಾರ್ಮಿಕ ಪದ್ಧತಿ ಕುರಿತು ಸಮಾರಂಭ ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಹೋಟೆಲ್ ಮಾಲಿಕರು, ಗ್ಯಾರೇಜ್ ಮಾಲೀಕರು ಪಾಲ್ಗೊಳ್ಳುವಂತೆ ಮಾಡಿ, ಅವರಿಗೆ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧ ಎಂಬುದರ ಬಗ್ಗೆ ತಿಳಿಸಿ ಕೊಡಬೇಕು ಎಂದರು.
ಸಹಾಯಕ ಕಾರ್ಮಿಕ ಆಯುಕ್ತರಾದ ಎಸ್.ಆರ್ ವೀಣಾ, ಅವರು ಮಾತನಾಡಿ, ಜೂನ್.12 ರಂದು ಬೆ.09 ಗಂಟೆಗೆ ಜಾಗೃತಿ ಜಾಥವನ್ನು ನಡೆಸಿ ನಂತರ ವೇದಿಕೆ ಕಾರ್ಯಕ್ರಮದ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ಡಿ.ಎಚ್.ಒ ಡಾ. ನಾಗರಾಜ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಡಿಡಿಪಿಐ ತಿಪ್ಪೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜನಾಯಕ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ್ ಬಿದರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಈ ರಮೇಶ್, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಯೋಜನಾ ನಿರ್ದೇಶಕ ಪ್ರಸನ್ನ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
garudavoice21@gmail.com 9740365719