ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ : ಗ್ರಾಹಕರು ಯಾವುದೇ ವಸ್ತು ಖರೀದಿಸಿದಾಗ ರಶೀದಿ ಪಡೆಯಬೇಕು : ಮೀನಾ ಹೆಚ್.ಎನ್ 

ದಾವಣಗೆರೆ : ಕಾನೂನಿನಲ್ಲಿ ಗ್ರಾಹಕರಿಗಾಗಿ ವಿಶೇಷವಾದ ಹಕ್ಕುಗಳನ್ನು ನೀಡಲಾಗಿದೆ, ಪ್ರತಿಯೊಬ್ಬ ಗ್ರಾಹಕರು ತಮಗೆ ಒದಗಿಸಲಾದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮೀನಾ ಹೆಚ್.ಎನ್ ಹೇಳಿದರು. ಮಂಗಳವಾರ ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ನ್ಯಾಯಬೆಲೆ ಅಂಗಡಿಗಳ ರೂಪಾಂತರ ಮತ್ತು ಸಬಲೀಕರಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ವಿಶ್ವ ಗ್ರಾಹಕರ ದಿನಾಚರಣೆಯು ಮೊಟ್ಟಮೊದಲಿಗೆ ಅಮೇರಿಕದಲ್ಲಿ ಶುರುವಾಯಿತು, ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ತಾಯಿ ಗರ್ಭದಿಂದ ಮರಣದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ.
ಗ್ರಾಹಕರು ಯಾವುದೇ ವಸ್ತು ಖರೀದಿಸಿದಾಗ ರಶೀದಿ ಪಡೆಯಬೇಕು, ರಸೀದಿ ಪಡೆಯುವುದರಿಂದ ಅನ್ಯಾಯಕ್ಕೊಳಗಾದ ಸಂದರ್ಭದಲ್ಲಿ ಕಾನೂನಿನ ಮೂಲಕ ರಕ್ಷಣೆ ಪಡೆಯಬಹುದು. ವ್ಯವಹಾರದ ಉದ್ದೇಶಕ್ಕಾಗಿ ವಸ್ತುಗಳ ಖರೀದಿಸುವವರನ್ನು ಗ್ರಾಹಕರೆಂದು ಪರಿಗಣಿಸಲಾಗುವುದಿಲ್ಲ, ವೈಯಕ್ತಿಕ ಹಾಗೂ ಇತರರ ಬಳಕೆಗೆ ಖರೀದಿಸುವವರನ್ನು ನಾವು ಗ್ರಾಹಕರು ಎನ್ನಬಹುದಾಗಿದೆ. ನಾವು ದಿನನಿತ್ಯ ಬಳಸುವ ಎಲ್ಲಾ ವಸ್ತುಗಳು ಸರಕುಗಳಾಗಿವೆ, ವಿವಿಧ ವಿಮೆಗಳನ್ನು ಪಡೆಯುವ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳು ಸಹಾಯವಾಗಲಿದೆ. ವಿದ್ಯುತ್ ಅಪಘಾತ, ಅಂಚೆ ಮತ್ತು ಸಹಕಾರ ಇಲಾಖೆಯ ಉಳಿತಾಯ, ಸೇವಾ ನ್ಯೂನ್ಯತೆಗಳು, ವೈದ್ಯಕೀಯ ನಿರ್ಲಕ್ಷದಿಂದ ಪ್ರಾಣ ಹಾನಿಯಾದಂತಹ ಸಂದರ್ಭದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ನ್ಯಾಯ ಮತ್ತು ಪರಿಹಾರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಒಬ್ಬ ಜಾಗೃತ ಗ್ರಾಹಕನಿಂದ ಸಬಲ ಆರ್ಥಿಕತೆ ಸೃಷ್ಟಿಸಲು ಸಾಧ್ಯವಾಗುತ್ತದೆ. ವ್ಯಾಪಾರದ ಜಗತ್ತಿನಲ್ಲಿ ಅಮಾಯಕರಿಗೆ ಮೋಸ ಮಾಡುವ ಅನೇಕ ಘಟನೆಗಳು ನಡೆಯುತ್ತವೆ, ಆದ್ದರಿಂದ ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದು ಜಾಗೃತರಾಗಬೇಕು ಎಂದರು. ಸರ್ಕಾರ ಯಾರು ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಉಚಿತವಾಗಿ ಅಕ್ಕಿ ನೀಡುತ್ತಿದೆ, ಜನರು ಉಚಿತವಾಗಿ ನೀಡುವ ಅಕ್ಕಿಯನ್ನು ಮಾರಾಟ ಮಾಡಿಕೊಳ್ಳದೆ ಅದರ ಸದುಪಯೋಗ ಪಡೆದುಕೊಳ್ಳಬೇಕು. ನ್ಯಾಯಬೆಲೆ ಅಂಗಡಿಯವರು ನ್ಯಾಯಕ್ಕಾಗಿ ದುಡಿಯಬೇಕು, ನ್ಯಾಯಬೆಲೆ ಅಂಗಡಿಗಳನ್ನು ವಿವಿಧ ಸೌಲಭ್ಯ ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸುವ ಧ್ಯೇಯ ಹೊಂದಲಾಗಿದೆ. ಕೋವಿಡ್ ಸಮಯದಲ್ಲಿ ನ್ಯಾಯಬೆಲೆ ಅಂಗಡಿಗಳ ಸೇವೆ ಶ್ಲಾಘನೀಯ ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಗ್ರಾಹಕರು ಜಾಗೃತರಾಗುವ ಮೂಲಕ ಪ್ರತಿಯೊಬ್ಬರೂ ಪ್ರಶ್ನಿಸುವ ಮನೋಭಾವವನ್ನು ಹೊಂದಿದ್ದಾರೆ. ಗ್ರಾಹಕರ ಹಕ್ಕುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಯಾವುದೇ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಹಾಗಾಗಿ ಗ್ರಾಹಕರು ಇದರ ಕುರಿತು ಹೆಚ್ಚಿನ ಜ್ಞಾನ ಪಡೆಯಬೇಕಾಗಿದೆ. ಆನ್ಲೈನ್ ಶಾಪಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇನ್ನಷ್ಟು ಬಿಗಿಯಾದ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ ಎಂದರು.
ಟ್ರೈನರ್ ಲೈಫ್ ಕೋಚ್ ಡಾ.ಶೃತಿ ಪಿ ಮಾತನಾಡಿ, ಯೋಗ್ಯವಾದ ಸರಕುಗಳನ್ನು ಖರೀದಿಸುವ ಹಕ್ಕು ಗ್ರಾಹಕರಿಗಿದೆ, ಭಾರತದಲ್ಲಿ 1986 ರಂದು ಗ್ರಾಹಕರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿತು. ಕಾಯ್ದೆ ಶುರುವಾದ ಸಂದರ್ಭದಲ್ಲಿ ಗೊಂದಲಗಳಿದ್ದವು, ನಂತರ ಪರಿಷ್ಕರಣೆ ಆಗಿ ಪುನಃ ಮರು ಜಾರಿಗೆ ಬಂದಿತು. ಮುಂದಿನ ದಿನಗಳಲ್ಲಿ ಜಗತ್ತು ಡಿಜಿಟಲೈಸ್ ಆಗಲಿದೆ, ಹಾಗಾಗಿ ಪ್ರತಿಯೊಬ್ಬರು ವ್ಯವಹಾರಗಳನ್ನು ಆನ್ಲೈನ್ ಮೂಲಕ ನಡೆಸುವ ಕ್ರಿಯೆಗೆ ಮುಂದಾಗಬೇಕು. ಇಂಟರ್ನೆಟ್ ಮೂಲಕ ಪೋನ್ಪೇ, ಗೂಗಲ್ಪೇ ವ್ಯವಸ್ಥೆಯನ್ನು ಸುರಕ್ಷಿತವಾಗಿ ಬಳಸುವುದರಿಂದ ಸಮಯದ ಉಳಿತಾಯವು ಆಗಲಿದೆ ಎಂದರು.   ದೆ ಸಂದರ್ಭದಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ತ್ಯಾಗರಾಜನ್ ಸಿ.ಎಸ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಹೆಚ್.ಎಸ್ ರಾಜು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಪಿ.ಅಂಜಿನಪ್ಪ, ಆಹಾರ ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ ಪ್ರಕಾಶ್ ಹಾಗೂ ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!