ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಕುರಿತು ಭಿತ್ತಿ ಪತ್ರ ಬಿಡುಗಡೆ

IMG-20210915-WA0008

 

ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ಸೆ.೧೫ ರಂದು ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ’ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ’ ಪ್ರಯುಕ್ತ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಆತ್ಮಹತ್ಯೆ ತಡೆಗಟ್ಟುವ ಕುರಿತು ಭಿತ್ತಿ ಪತ್ರಗಳನ್ನು ಬುಧವಾರದಂದು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಒತ್ತಡದ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಆತ್ಮಹತ್ಯೆಗೆ ಶರಣಾಗುವುದು ಮಹಾಪಾಪ, ಏನೇ ಇದ್ದರೂ ಕೂಡ ಎದುರಿಸಿ ಹೋರಾಡಿ ಗೆಲ್ಲಬೇಕು. ನಮ್ಮನ್ನು ನಂಬಿಕೊಂಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆಯಾದರು ಒಮ್ಮೆ ಯೋಚನೆ ಮಾಡಬೇಕು ಆಗಲಾದರೂ ಮನಸ್ಸು ಬದಲಾಗುತ್ತದೆ ಎಂದು ತಿಳಿಸಿದರು.

ಒತ್ತಡದಿಂದ ಮುಕ್ತರಾಗಲು ಧ್ಯಾನ, ಯೋಗ ಪ್ರಾಣಯಾಮ ಮಾಡಿದರೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದ ಅವರು, ಜಿಲ್ಲಾದ್ಯಂತ ಮನೋವೈದ್ಯರ ತಂಡವು ಮಾನಸಿಕ ಆರೋಗ್ಯ ಶಿಬಿರವನ್ನು ಏರ್ಪಡಿಸಿ, ಅಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ, ಆಪ್ತಸಮಾಲೋಚನೆ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಮುರಳೀಧರ ಪಿ. ಡಿ. ಮಾತನಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಿಂದ ತಾಲ್ಲೂಕುವಾರು ಮನೋಚೈತನ್ಯ ಕಾರ್ಯಕ್ರಮ ರೂಪಿಸಿ ಜಿಲ್ಲೆಯಲ್ಲಿ ಒತ್ತಡ ಮುಕ್ತರಾಗಿಸಲು ಎಲ್ಲಾ ಇಲಾಖೆ ಸೇರಿದಂತೆ ಸಮುದಾಯದ ಜನರಿಗೆ ಕೂಡ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ. ಯಾರಿಗಾದರೂ ಸಹಾಯ ಬೇಕಾದಲ್ಲಿ ೧೦೪ ಆರೋಗ್ಯ ಸಹಾಯವಾಣಿಗೆ ಕರೆಮಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸಿ.ಇ.ಓ. ಡಾ. ವಿಜಯ ಮಹಾಂತೇಶ ಬಿ ದಾನಮ್ಮನವರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ, ಡಿ.ಹೆಚ್.ಓ. ಡಾ. ನಾಗರಾಜ್, ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ, ಮನೋವೈದ್ಯರಾದ ಡಾ. ಗಂಗಂ ಸಿದ್ದಾರೆಡ್ಡಿ, ಸಾಮಾಜಿಕ ಕಾರ್ಯಕರ್ತ ಸಂತೋಷ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!