ರಾಜ್ಯದಲ್ಲಿಯೇ ಪ್ರಥಮ ಕಪ್ಪು ಶಿಲೆಯ ‘ಅಪ್ಪು ಪ್ರತಿಮೆ’ ನಿರ್ಮಾಣ ಮಾಡಿ ಅನಾವರಣಗೊಳಿಸಿದ ದಾವಣಗೆರೆ ಜಿಲ್ಲೆಯ ಯುವಕರು
ದಾವಣಗೆರೆ: ಇತ್ತೀಚೆಗಷ್ಟೆ ಕೊಟ್ಯಾಂತರ ಅಭಿಮಾನಿಗಳನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕಪ್ಪು ಶಿಲೆಯ ಪ್ರತಿಮೆಯನ್ನು ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಅಭಿಮಾನಿಗಳು ನಿರ್ಮಿಸಿ ಉದ್ಘಾಟಿಸುವ ಮೂಲಕ ಪುನೀತ್ ನೆನಪನ್ನು ಅಜರಾಮರಗೊಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ಶಿಲ್ಪಿ ವಿಪೀನ್ ಬಾದುರ್ಯಾ ಎಂಬುವರು ಇದನ್ನು ಕಪ್ಪು ಶಿಲೆಯ ಪ್ರತಿಮೆ ನಿರ್ಮಾಣ ಮಾಡಿದ್ದು, 90 ಸಾವಿರ ರು., ವೆಚ್ಚದಲ್ಲಿ ಪುತ್ಥಳಿ ಸುಂದರವಾಗಿ ಮೂಡಿಬಂದಿದೆ. ‘ಅಪ್ಪು ಪ್ರತಿಮೆ ಅನಾವರಣ’ ಕಾರ್ಯಕ್ರಮವನ್ನು ಮಹಾಂತ ರುದ್ರೇಶ್ವರ ಶ್ರೀ ನಡೆಸಿಕೊಟ್ಟರು. ಬಳಿಕ ಸಾಕಷ್ಟು ಜನ ರಕ್ತದಾನ ಮಾಡಿದರು. ಜೊತೆಗೆ ಇಡೀ ಹೆಬ್ಬಾಳು ಗ್ರಾಮದ ಗ್ರಾಮಸ್ಥರು ನೇತ್ರದಾನ ಮಾಡಲು ಹೆಸರು ನೋಂದಣಿ ಮಾಡಿದ್ದು ಪುನೀತ್ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಯಿತು.
ಈ ರೀತಿಯ ಕಪ್ಪು ಶಿಲೆಯ ಅಪ್ಪು ಪ್ರತಿಮೆ ನಿರ್ಮಾಣ ಮಾಡಿ ಅನಾವರಣಗೊಳಿಸಿರುವುದು ರಾಜ್ಯದಲ್ಲಿಯೇ ಜಿಲ್ಲೆಯಲ್ಲಿ ಮೊದಲ ಬಾರಿಯಾಗಿದ್ದು, ಈ ಪುತ್ಥಳಿಯನ್ನು ನಿರ್ಮಾಣ ಮಾಡಿಸಲು ಹೆಬ್ಬಾಳು ಗ್ರಾಮದ ಯುವಕರು ಉತ್ತರ ಪ್ರದೇಶದ ಶಿಲ್ಪಿ ವಿಪೀನ್ ಬಾದುರ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅಪ್ಪು ಪ್ರತಿಮೆ ನಿರ್ಮಿಸಲು ಕೇಳಿಕೊಂಡಾಗ ವಿಪೀನ್ ಹಿಂದೆ ಮುಂದೆ ನೋಡದೆ ಕೂಡಲೇ ಒಪ್ಪಿಕೊಂಡರಂತೆ. ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಆಗಮಿಸಿದ ವಿಪೀನ್, ಸಾಗರದಲ್ಲೇ ಈ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ.
ಪುನೀತ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಸಾಧ್ಯವಾಗದ ಹೊತ್ತಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಅವರ ಅಕಾಲಿಕೆ ಸಾವು ಕೊಟ್ಯಾಂತರ ಅಭಿಮಾನಿಗಳ ಹೃದಯವನ್ನು ಚೂರಾಗಿಸಿದ್ದು ಮಾತ್ರ ಸುಳ್ಳಲ್ಲ.