ದಾವಣಗೆರೆಯ ಸಿಟಿ ಬಸ್ಸಿನಲ್ಲಿ ಕೂತಿದ್ದ ಇಬ್ಬರು ಗಂಡಸರು ಜಿ ಎಂ ಸಿದ್ದೇಶ್ವರ ಬಗ್ಗೆ ಹೀಗೆಲ್ಲಾ ಮಾತಾನಾಡುತ್ತಿದ್ದರು.!- ಅರುಣ್ ಕೋಟೆ

ದಾವಣಗೆರೆ: ಇತ್ತಿಚೆಗೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡಿದ್ದ ವಿಚಾರವಾಗಿ ಈಗೊಂದು ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ..! ಅದು ಹೇಗಿದೆ ಎಂದರೆ ಯಾರೋ ನಗರ ಸಾರಿಗೆ ಬಸ್ ನಲ್ಲಿ ಸಂಚರಿಸುವಾಗ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಿಕೊಂಡಿದ್ದಾರಂತೆ..! ಅವರಿಬ್ಬರ ಸಂಬಾಷಣೆಯ ಮಾತುಗಳನ್ನ ಅರುಣ್ ಕೋಟೆ ಎಂಬುವವರು ಅಕ್ಷರದ ರೂಪದಲ್ಲಿ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ.
ದಾವಣಗೆರೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಪ್ರಬಲವಾಗಿ ಕಟ್ಟಿದವರ ಹೆಸರುಗಳನ್ನು ಹೇಳ ಹೊರಟರೆ ಅದರಲ್ಲಿ ಖಂಡಿತವಾಗಿಯೂ ಜಿ ಎಂ ಸಿದ್ದೇಶ್ವರ ಹೆಸರಂತೂ ಇರುವುದಿಲ್ಲ. ಆದರೆ ಅವರ ಹೆಸರು ಮತ್ತೊಂದು ಪಟ್ಟಿಯಲ್ಲಿ ಸಿಗುತ್ತದೆ. ದಾವಣಗೆರೆಯಲ್ಲಿ ಪ್ರಬಲವಾಗಿ ಬೆಳೆದ ಬಿಜೆಪಿ ಪಕ್ಷದಿಂದ ಅತಿಹೆಚ್ಚು ಲಾಭಮಾಡಿಕೊಂಡವರ ಹೆಸರಿನಲ್ಲಿ ಜಿ ಎಂ ಸಿದ್ದೇಶ್ವರ್ ಗೆ ನಂಬರ್ ೧ ಸ್ಥಾನ.
ಕರ್ನಾಟಕದಲ್ಲಿ ಬಹುಶಃ ಒಬ್ಬ ಭಾರೀ ಅದೃಷ್ಟಶಾಲಿ ಸಂಸದ ಯಾರಾದರೂ ಇದ್ದರೆ ಅದು ಜಿ ಎಂ ಸಿದ್ದೇಶ್ವರ್.ಅವರು ಉತ್ತಮ ವಾಗ್ಮಿಗಳಲ್ಲ, ತತ್ವ ಸಿದ್ದಾಂತ ಅಂದ್ರೆ ಅವೆಲ್ಲಾ ಅವರಿಗೆ ಗೊತ್ತೇ ಇಲ್ಲ.ಅವರು ಜನಸಾಮಾನ್ಯರ ಬಳಿಗೆ ಹೋಗುವ ಅಸಾಮಿಯೂ ಅಲ್ಲ. ಪಕ್ಷ ಸಂಘಟನೆಗೆ ಅವರ ಬಳಿ ಯಾವ ಐಡಿಯಾವೂ ಇಲ್ಲ. ಅವರ ರಾಜಕೀಯ ಹಾದಿಯಲ್ಲಿ ಒಂದು ಹೋರಾಟವೂ ಇಲ್ಲ,ನಾಲ್ಕು ಬಾರಿ ಸಂಸದರಾದರೂ ಅವರು ದಾವಣಗೆರೆಯಲ್ಲಿ ಜನಪ್ರಿಯತೆಯನ್ನು ಹೊಂದಿಲ್ಲ.ಇನ್ನು ವಿಚಿತ್ರ ಏನಂದ್ರೆ ಅವರು ರಾಜಕಾರಿಣಿಯೇ ಅಲ್ಲ, ಅವರೊಬ್ಬ ಉದ್ಯಮಿ.ಅವರಿಗಿರುವ ಒಂದೇ ಒಂದು ಕ್ವಾಲಿಟಿ ಅಂದ್ರೆ ಅದು ಅದೃಷ್ಟ.
ಯಾವುದೋ ಒಂದು ಪವಾಡ ಅವರನ್ನು ಪ್ರತಿ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದೆ ಆದರೆ ಆ ಪವಾಡ ಮಾಡುವ ಶ್ರಮವನ್ನೂ ಅವರು ತೆಗೆದುಕೊಂಡವರಲ್ಲ,
ಅದಕ್ಕೆ ದಾವಣಗೆರೆ ಜಿಲ್ಲೆಯ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿದ್ದಾರೆ.ಬಿಜೆಪಿ ಹುಡುಗ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ಮನಸ್ಸುಗಳು ಕಳವಳಗೊಂಡಿದಾವೆ,ಅವರು ನೊಂದಿದ್ದಾರೆ, ಆಕ್ರೋಶಗೊಂಡಿದ್ದಾರೆ, ಈ ದುರಂತದ ಕುರಿತು ತಮ್ಮ ಅಸಹಾಯಕತೆಯನ್ನು ತಾವೇ ಸಹಿಸದಾಗಿದ್ದಾರೆ.
ಈಗ ಕಾರ್ಯಕರ್ತರು ಹೆಣವಾಗುವ ಸಾಲು ಸಾಲು ಘಟನಾವಳಿಗಳಿಂದ ರೋಸತ್ತು ಪಕ್ಷದ ನಾಯಕರುಗಳ ಮೇಲೆ ತಿರುಗಿಬಿದ್ದಿದ್ದಾರೆ,
ಈ ನೋವಿನ ಅಭಿವ್ಯಕ್ತಿಯಾಗಿ ರಾಜ್ಯಾದ್ಯಂತ ಕಾರ್ಯಕರ್ತ ಯುವಕರು ಪಕ್ಷದ ತಮ್ಮ ಸ್ಥಾನಗಳಿಗೆ, ಜವಾಬ್ದಾರಿಗಳಿಗೆ ಸಹಜವಾಗೇ ರಾಜೀನಾಮೆ ಕೊಡಲಾರಂಭಿಸಿದ್ದಾರೆ.ಕಾರ್ಯಕರ್ತರ ಈ ಮುನಿಸನ್ನು ಶಮನ ಮಾಡಬೇಕಾದವರು ಯಾರು? ಆ ಪಕ್ಷದ ನಾಯಕರು ತಾನೇ?
ನೊಂದವರಿಗೆ, ಆಕ್ರೋಶಗೊಂಡವರಿಗೆ ಬೇಕಿದ್ದು ಒಂದು ಸಮಾಧಾನ. ಬೆನ್ನು ಸವರಿ, ಒಂದು ಭರವಸೆ ನೀಡಿ, ಪಕ್ಷದಲ್ಲಿ ಮುಂದುವರೆಯುವಂತೆ ಸಲಹೆ ನೀಡುವ ಮೃದುವಾದ ಮಾತಾನಾಡುವ ಬದಲು, ‘ರಾಜೀನಾಮೆ ಕೊಟ್ಟಾಕ್ಷಣ ಪಕ್ಷ ಏನ್ ಮುಳುಗೋಗಲ್ಲ,’ ‘ಟಿವಿ ಯಲ್ಲಿ ಬರ್ತೀವಿ ಅಂತಾ ರಾಜೀನಾಮೆ ಕೊಡ್ತಾ ಇದಾರೆ’ ಅಂತೆಲ್ಲ ಮಾಧ್ಯಮದ ಮುಂದೆ ಉಡಾಫೆ ಮಾತಾನಾಡಿದ್ದಾರೆ,ಈ ಅದೃಷ್ಟವಂತ ಸಂಸದ ಸಿದ್ದೇಶ್ವರ್.
ಇವರು ಕಾರ್ಯಕರ್ತರನ್ನು ಸಂಬಳ ಕೊಟ್ಟು ಇಟ್ಟುಕೊಂಡಿದಾರ? ಅಂತಹ ಧಾಡಸೀತನ ಇವರಿಗಿದ್ದರೆ ರಾಜೀನಾಮೆ ಅಂಗೀಕರಿಸಿ ಪಕ್ಷದ ಬಲವನ್ನು ಕಾಪಾಡಿಕೊಳ್ಳಲಿ.ಮುಂಬರುವ ಚುನಾವಣೆಯನ್ನು ದಕ್ಕಿಸಿಕೊಳ್ಳಲು ಈಗಲೂ ಅವಕಾಶವಿದೆ, ಕಾರ್ಯಕರ್ತರನ್ನು ಪ್ರೀತಿಯಿಂದ ಮನವೊಲಿಸಿದರೆ ಸಾಕು, ಅಷ್ಟಕ್ಕೂ ಇವರ ‘ಅದೃಷ್ಟ’ವೆಂದರೆ ಅದು ‘ಕಾರ್ಯಕರ್ತ’ರೇ ಅಲ್ಲವೇ?
ಚಿಗಟೇರಿ ಆಸ್ಪತ್ರೆಯ ಬಳಿ ಇಳಿದುಕೊಂಡ್ರು, ಮುಂದೇನ್ ಮಾತಾಡಿಕೊಂಡರೊ ದೇವರೇ ಬಲ್ಲ. ಈ ರೀತಿಯ ಚರ್ಚೆ ನಡೆದಿರುವ ಮಾತಿನ ಅಕ್ಷರದ ಅಕ್ಷರದ ಕೋಟೆ ಸಿದ್ದಪಡಿಸಿದವರು ಅರುಣ್ ಕೋಟೆ.