ಕೇಂದ್ರ ಮತ್ತು ರಾಜ್ಯದ ರೈಸ್ ಪಾಲಿಟಿಕ್ಸ್: ಜುಲೈ 1 ರಿಂದ ಅನ್ನಭಾಗ್ಯ ಡೌಟ್
ಬೆಂಗಳೂರು (ಜೂ.14): ರಾಜ್ಯ ಸರ್ಕಾರದಿಂದ ಅಕ್ಕಿ ಪೂರೈಕೆ ಮಾಡಿಕೊಳ್ಳಲು ಮಾಡಿಕೊಂಡಿದ್ದ ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನವಾಗಿದೆ.
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಜುಲೈ 1 ರಿಂದ ವಿತರಣೆ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ರಾಜ್ಯಕ್ಕೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಸರಬರಾಜು ಮಾಡುವಂತೆ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ)ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೇಂದ್ರ ಸರ್ಕಾರ ಮುರಿದು ಬೀಳುವಂತೆ ಮಾಡಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ 10 ಕೆಜಿ ಅಕ್ಕಿಯನ್ನು ಕೊಡಲು ಮೊದಲ ಸಚಿವ ಸಂಪುಟಲದಲ್ಲಿಯೇ ತೀರ್ಮಾನ ಮಾಡಿದ್ದೇವೆ. ರಾಜ್ಯದ ಜನತೆಗೆ, ಈಗ ಸರ್ಕಾರ ಕೊಡುವುದಕ್ಕಿಂತ ತಲಾ 5 ಕೆ.ಜೆ. ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಒಟ್ಟು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಹೆಚ್ಚುವರಿ ಬೇಕಾಗುತ್ತದೆ. ಎಫ್‌ಸಿಐಗೆ ನಮ್ಮ ರಾಜ್ಯದ ಅಧಿಕಾರಿಗಳು ಮಾತನಾಡಿದಾಗ ಎಫ್‌ಸಿಐ ಅಧಿಕಾರಿಗಳು ಅಕ್ಕಿ ಸರಬರಾಜು ಮಾಡುವುದಾಗಿ ಒಪ್ಪಿಕೊಂಡಿದ್ದರು. ನಾನು ಡೆಪುಟಿ ಜನರಲ್ ಮ್ಯಾನೇಜರ್ ಅವರನ್ನು ಕರೆದು ಮಾತನಾಡಿದಾಗ, ಇದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳು ಅಕ್ಕಿ ತಪ್ಪದೇ ಕೊಡಬೇಕು ಎಂದು ಹೇಳಿದಾಗ ಅವರು ಒಪ್ಪಿಕೊಂಡಿದ್ದರು.
36 ರೂ.ಗೆ ಅಕ್ಕಿ ಸಬರರಾಜು ಮಾಡಲು ಒಪ್ಪಂದ: ರಾಜ್ಯ ಸರ್ಕಾರ ಮತ್ತು ಎಫ್‌ಸಿಐ ಒಪ್ಪಂದದಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ. ಬೆಲೆ ಹಾಗೂ 2 ರೂ.60 ಪೈಸೆ ಸರಬರಾಜು ವೆಚ್ಚ ಸೇರಿದಂತೆ 36 ರೂ.60 ಪೈಸೆಯಂತೆ ಅಕ್ಕಿ ಸರಬರಾಜು ಮಾಡಲು ಒಪ್ಪಿಕೊಂಡಿತ್ತು. ಇದಕ್ಕೆ ರಾಜ್ಯ ಸರ್ಕಾರಕ್ಕೆ ತಗಲುವ ವೆಚ್ಚ 840 ಕೋಟಿ ರೂ. ಆಗುತ್ತಿತ್ತು. ಒಂದು ವರ್ಷಕ್ಕೆ 10,092 ಕೋಟಿ ರೂ. ಖರ್ಚಾಗುತ್ತಿತ್ತು. ಜೂ.9ರಂದೇ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ)ಗೆ ರಾಜ್ಯ ಸರ್ಕಾರದಿಂದ ಪತ್ರವನ್ನು ಬರೆದಿದ್ದು, ಇದಕ್ಕೆ ಒಪ್ಪಿಕೊಂಡು ಅಕ್ಕಿ ಸರಬರಾಜು ಮಾಡುವುದಾಗಿ ಎಫ್‌ಸಿಐ ರಾಜ್ಯಕ್ಕೆ ಜೂ.12ರಂದು ಪತ್ರವನ್ನೂ ಬರೆದಿತ್ತು ಎಂದು ಹೇಳಿದರು.
ಅಕ್ಕಿ ಸರಬರಾಜು ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ: ಆದರೆ, ಇದಾದ ನಂತರ ಜೂ.13 ರಂದು ಆದರೆ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶದ ಯಾವುದೇ ರಾಜ್ಯಗಳಿಗೆ ಓಪೆನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ ಡೊಮೆಸ್ಟಿಕ್ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿ ಮತ್ತು ಗೋಧಿಗಳನ್ನು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಈ ಮೂಲಕ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವುದಕ್ಕೆ ಆಗುವುದಿಲ್ಲವೆಂದು ತಿಳಿಸಿ, ಕರ್ನಾಟಕದ ಯೋಜನೆಯನ್ನು ವಿಫಲಗೊಳಿಸಲು ರಾಜಕೀಯ ಮಾಡಿದ್ದಾರೆ. ನಾವು ಜುಲೈ 1ನೇ ತಾರೀಖಿನಿಂದ ಅಕ್ಕಿಯನ್ನು ಕೊಡುವುದಾಗಿ ನಾವು ರಾಜ್ಯದ ಜನತೆಗೆ ಭರವಸೆಯನ್ನು ನೀಡಿದ್ದೆವು. ಆದರೆ, ಈಗ ಅಕ್ಕಿ ಸರಬರಾಜು ಮಾಡುವುದಕ್ಕೆ ಆಗುವುದಿಲ್ಲವೆಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಅಕ್ಕಿ ಕೊಡುವುದಕ್ಕೆ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದರು.