Temple : 65 ವರ್ಷ ಮೇಲ್ಪಟ್ಟವರಿಗೆ, ದೇವಸ್ಥಾನಗಳಲ್ಲಿ ನೇರ ದರ್ಶನ
ಬೆಂಗಳೂರು : ಹಿರಿಯ ನಾಗರೀಕರ ಬಹುದಿನಗಳ ಬೇಡಿಕೆಯಂತೆ 65 ವರ್ಷಕ್ಕಿಂತ ಮೇಲ್ಪಟ್ಟವರು ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ತಿರುಪತಿ – ತಿರುಮಲದ ಮಾದರಿಯಂತೆ ಇನ್ನು ಮುಂದೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಅಗತ್ಯವಿಲ್ಲ. ನೇರವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ ‘ಎ’ ಮತ್ತು ‘ಬಿ ಶ್ರೇಣಿಯ ದೇವಾಲಯಗಳಲ್ಲಿ, 65 ವರ್ಷ ಮೇಲ್ಪಟ್ಟ ಇರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ವಯಸ್ಸಿನ ಅಧಾರದ ಮೇಲೆ ಸರತಿಯ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಿರಿಯ ನಾಗರೀಕರಿಗೆ ದೇವರ ದರ್ಶನಕ್ಕೆ, ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟಕರವಾಗಿರುವುದರಿಂದ 65 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ, ಅವರಿಗೆ ದೇವರ ದರ್ಶನಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿದೆ. ದೇವಾಲಯದಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರೀಕರಿಗೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಸೂಚಿಸಲಾಗಿದೆ.