ಮದ್ಯದ ಬೆಲೆ ಇಳಿಸಿ, ಇಲ್ಲವೇ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಸರ್ಕಾರಕ್ಕೆ ಮದ್ಯ ಪ್ರಿಯರ ಒತ್ತಾಯ
ಉಡುಪಿ: ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲದಿದ್ದಲ್ಲಿ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮದ್ಯಪ್ರಿಯರ ಬೇಡಿಕೆ.
ಹೌದು, ಮದ್ಯದ ಬೆಲೆ ಏರಿಕೆಯನ್ನು ಖಂಡಿಸಿ ಮಂಗಳವಾರ ಉಡುಪಿ ನಗರದಲ್ಲಿ ಎಣ್ಣೆ ಪ್ರಿಯರ ಗುಂಪೊಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿಈ ಪ್ರತಿಭಟನೆ ನಡೆಯಿತು. ಮದ್ಯಪ್ರಿಯರಿಗೆ ಮಲ್ಲಿಗೆ ಹಾರ ಹಾಕಿ ಆರತಿ ಎತ್ತಿ ಗೌರವಿಸಲಾಯಿತು. ಪ್ರತಿಭಟನೆ ಸ್ಥಳದಲ್ಲಿ ದೊಡ್ಡ ಮದ್ಯದ ಬಾಟಲಿಯನ್ನು ಇಟ್ಟು ಅದಕ್ಕೆ ಪೂಜೆ ಮಾಡಲಾಗಿದ್ದು ಗಮನ ಸೆಳೆಯಿತು.
ಸರ್ಕಾರ ಉಚಿತ ಭಾಗ್ಯಗಳನ್ನು ಜಾರಿಗೊಳಿಸಿದೆ. ಆದ್ದರಿಂದ ಮದ್ಯದ ಬೆಲೆ ಹೆಚ್ಚಳ ಮಾಡಿದೆ. ಮದ್ಯ ವ್ಯಸನಿಗಳಿಂದಲೇ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಮದ್ಯದ ಬೆಲೆ ಏರಿಕೆಯಿಂದ ಕೂಲಿ ಕಾರ್ಮಿಕರು ಮದ್ಯ ಸೇವಿಸಲು ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ.
ಸರ್ಕಾರವು ಉಚಿತ ಭಾಗ್ಯಗಳನ್ನು ನೀಡಿದಂತೆ ಕಾರ್ಮಿಕ ವರ್ಗದವರಿಗೆ ಉಚಿತ ಮದ್ಯವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.