ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ದಿನವನ್ನ ದಾಸೋಹ ದಿನವನ್ನಾಗಿ ಘೋಷಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತುಮಕೂರು: ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನ ದಾಸೋಹ ದಿನವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಎರಡನೇ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಅವರು ಮಾಡಿರೋ ಸೇವೆ ಅನನ್ಯ. ಆಧುನಿಕ ಭಾರತದಲ್ಲಿ ಅವರು ಮಾಡಿದ ಸೇವೆ ವೇಳೆಯಲ್ಲಿ ನಾವಿರುವುದು ಧನ್ಯತಾ ಭಾವ. ಅದರ ಆಚರಣೆಯ ರೂಪುರೇಷಗಳನ್ನ ಸಿದ್ದಲಿಂಗ ಶ್ರೀಗಳ ಬಳಿ ಚರ್ಚಿಸಲಾಗುವುದು ಎಂದರು.
ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಮೂರನೇ ಅಲೆ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಸ್ಯಾಂಪಲ್‍ಗಳನ್ನು ಡೆಲ್ಟಾ ಅಥವಾ ಓಮಿಕ್ರಾನ್ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಕಳಿಸುತ್ತಿದ್ದೇವೆ. ವಿಮಾನ ನಿಲ್ದಾಣ ಹಾಗೂ ಕೇರಳದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಶಾಲೆ, ಕಾಲೇಜುಗಳಲ್ಲೂ ಸಹ ಹೆಚ್ಚಿನ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಬೆಳೆ ಹಾನಿ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, 685 ಕೋಟಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರಿಹಾರ ಕೊಟ್ಟಿದ್ದೇವೆ. ಇನ್ನೂ ಹೆಚ್ಚಿನ ಪರಿಹಾರ ಬೇಕಿದ್ದರೆ ಕೊಡಲು ಸಿದ್ಧರಿದ್ದೇವೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರಕ್ಕೆ ಪತ್ರ ಬರೆದು ತಂಡವನ್ನ ಸಮೀಕ್ಷೆಗೆ ಕಳುಹಿಸುವಂತೆ ಕೇಳಿಕೊಂಡಿದ್ದೇವೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು.