ಚರ್ಮಗಂಟು ರೋಗದಿಂದ 1,188 ಜಾನುವಾರುಗಳು ಸಾವು.! ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಕಳವಳ.!

ದಾವಣಗೆರೆ: ಅಡಿಕೆ ಬೆಳೆ ಜೊತೆಗೆ ಇತರ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಉತ್ತೇಜನ ನೀಡುವಂತೆ ಅಧಿಕಾರಿಗಳಿಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನಾ ವೇಳೆಯಲ್ಲಿ ಜೈವಿಕ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಹಾಗೂ ರೈತರಿಗೆ ಲಾಭದಾಯಕ ತಳಿಗಳನ್ನು ಬೆಳೆಯಲು ಕೃಷಿ ಇಲಾಖೆ ಅಗತ್ಯ ನೆರವು ಒದಗಿಸಬೇಕು  ಎಂದು ಸೂಚನೆ ನೀಡಿದರು.
ಕೇವಲ ಅಡಿಕೆ ಅಲ್ಲದೇ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಬೇಕು. ಇಲ್ಲವಾದರೆ ಕೇವಲ ಅಡಿಕೆಗೆ ರೈತರು ಸೀಮಿತವಾಗುವ ಪರಿಸ್ಥಿತಿ ಉಂಟಾಗುತ್ತದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹೊಸದಾಗಿ ಬೋರ್ ಕೊರೆಸುವ ಅಗತ್ಯವಿಲ್ಲ. ಯಾವುದಾದರು ಗ್ರಾಮಗಳಲ್ಲಿ ಬೋರ್‍ಗಳ ದುರಸ್ತಿ ಇದ್ದರೆ ಅವುಗಳನ್ನೇ ರಿಪೇರಿ ಮಾಡಿ ಬಳಸಿಕೊಳ್ಳಿ. ಸಾಧ್ಯವಾದಷ್ಟು ಜನರಿಗೆ ನದಿಗಳ ಮೂಲಕ ಕುಡಿಯುವ ನೀರು ಒದಗಿಸುವ ಯೋಜನೆಗಳ ಬಗ್ಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.
ಚರ್ಮಗಂಟು ರೋಗದಿಂದ 1,188 ಜಾನುವಾರುಗಳು ಸಾವನ್ನಪ್ಪಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಲಸಿಕೆ ಪಡೆದ ನಂತರವೂ ಜಾನುವಾರುಗಳು ಸಾವನ್ನಪ್ಪಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದ ಅವರು, ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಹಾಗೂ ಸಾಕ್ಸ್‍ಗಳು ಪೂರೈಕೆಯಾಗುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸ್ವಚ್ಛ ಭಾರತ: ಸ್ವಚ್ಛ ಭಾರತ ನಿರ್ಮಾಣ ಈ ದೇಶದ ಪ್ರಧಾನಿಗಳ ಆಶಯವಾಗಿದೆ. ನಗರ, ಪಟ್ಟಣಗಳ ಮಾದರಿಯಲ್ಲಿ ಗ್ರಾಮ ಪಂಚಾಯತಿಗಳಿಂದ ಗ್ರಾಮಗಳಲ್ಲೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ, ಪಟ್ಟಣಗಳಂತೆಯೇ ಗ್ರಾಮಗಳಲ್ಲಿಯೂ ಸ್ವಚ್ಛತೆಗೆ ಸಿಬ್ಬಂದಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಾಧನೆಗೆ ತೃಪ್ತಿ: ವಿವಿಧ ಇಲಾಖೆಯ ಪ್ರಗತಿಯ ಪರಿಶೀಲನೆ ನಡೆಸಿದ ಅವರು, ನವೆಂಬರ್ ಅಂತ್ಯದವರೆಗೆ ಇಲಾಖಾವಾರು ನಿಗಧಿತ ಗುರಿ ಅನ್ವಯ ಸಾಧಿಸಿದ ಪ್ರಗತಿ ಕುರಿತಂತೆ ಪ್ರಶಂಶೆ ವ್ಯಕ್ತಪಡಿಸಿ ಮುಂಬರುವ ಜನವರಿ-ಫೆಬ್ರುವರಿ ಮಾಹೆಯ ಅಂತ್ಯಕ್ಕೆ ಈ ವರ್ಷದ ವಾರ್ಷಿಕ ಗುರಿಯ ಶೇ.90ರಷ್ಟು ಸಾಧನೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಲೋಕೇಶ್ ಯುವ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      