ಜೆ ಜೆ ಎಂ ಮೆಡಿಕಲ್ ಕಾಲೇಜಿನ 2017 ನೇ ಬ್ಯಾಚಿನ ಪದವಿ ಪ್ರಧಾನ ಸಮಾರಂಭ

ದಾವಣಗೆರೆ :ಜೆ ಜೆ ಎಂ ಮೆಡಿಕಲ್ ಕಾಲೇಜಿನ 2017 ನೇ ಬ್ಯಾಚಿನ ಪದವಿ ಪ್ರಧಾನ ಸಮಾರಂಭವನ್ನು ನಗರದ ಡಾ. ಎಸ್ ಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪೆರೇಡ್ನೊಂದಿಗೆ ಪ್ರಾರಂಭವಾದ ಸಮಾರಂಭವು ತುಂಬಾ ಸುಂದರವಾಗಿ ಆಯೋಜನೆಗೊಂಡಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಐ ಬಾಳೆಕುಂದ್ರಿ ಶುದ್ಧ ಕನ್ನಡದಲ್ಲಿ ತಮ್ಮ ಮಾತನ್ನು ಪ್ರಾರಂಭಿಸಿ ಜೀವನದಲ್ಲಿ ಪ್ರತಿಕ್ಷಣವೂ ಕಲಿಯುವಿಕೆ ಯಾಗಿರುತ್ತದೆ, ವೈದ್ಯರಾದ ನಾವು ಧೈರ್ಯಗೆಡದೆ ಪ್ರತಿ ಸವಾಲನ್ನು ಹೆಚ್ಚಿನ ಸಂತೋಷದಿಂದ ಸ್ವೀಕರಿಸಬೇಕು ಅದನ್ನು ಗೆಲ್ಲಬೇಕು, ಹಾಗೆ ಪ್ರತಿಯೊಬ್ಬ ವೈದ್ಯನ ಜಯದ ಹಿಂದೆ ಸಹಾಯಕ ಸಿಬ್ಬಂದಿಗಳು ಅತಿ ಮುಖ್ಯ ಅವರನ್ನು ಎಂದೂ ಕಡೆಗಣಿಸಬಾರದು, ಅವರು ನಮ್ಮ ಸಪೋರ್ಟಿಂಗ್ ಸಿಸ್ಟಮ್ ಆಗಿರುತ್ತಾರೆ ಎಂದರು. ಪದವಿ ಪಡೆಯುತ್ತಿರುವ ವೈದ್ಯರನ್ನು ಉದ್ದೇಶಿಸಿ ಒಬ್ಬ ಒಳ್ಳೆ ವೈದ್ಯನಾಗಲು ಬೇಕಾಗಿರುವ ಅತ್ಯವಶ್ಯಕ 10 ಆಜ್ಞೆಗಳನ್ನು ತಿಳಿಸಿದರು ನಮ್ಮ ನಗು, ಮಾತು, ಅಕ್ಕರೆ ರೋಗಿಗಳ ಅರ್ಧ ರೋಗವನ್ನು ಗುಣಪಡಿಸುತ್ತವೆ ಅದನ್ನು ನಾವು ನಮ್ಮಲ್ಲಿ ರೂಡಿಸಿಕೊಳ್ಳಬೇಕು, ವೈದ್ಯರ ಸುತ್ತ ಋಣಾತ್ಮಕ ಗುಣಗಳೆ ಹೆಚ್ಚು ಕಾಣುತ್ತಿರುತ್ತವೆ ಆದರೆ ನಾವು ಧನಾತ್ಮಕ ಅಂಶಗಳನ್ನು ಮಾತ್ರ ಗಮನಿಸಬೇಕು ಎಂದರು.
ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಬಿ ಮುರುಗೇಶ್ ರವರು ನೀವು ಈಗ ನಿಮ್ಮ ಕನಸುಗಳನ್ನು ಸಾಧಿಸಿ ನಿಜವಾದ ಜಗತ್ತಿಗೆ ಕಾಲಿಡುತ್ತಿದ್ದೀರಿ ಇಂದು ಇರುವ ನಿಮ್ಮ ಸಂತೋಷ ನಿಮ್ಮ ಜೀವನದುದ್ದಕ್ಕೂ ಇರಬೇಕು, ಜ್ಞಾನ ಮತ್ತು ಕಲಿಕೆಯು ಒಂದು ಪ್ರಯಾಣ ಅದು ತಲುಪಬೇಕಾದ ಸ್ಥಳವಲ್ಲ ನಿಮ್ಮ ಪ್ರಯಾಣವನ್ನು ಕೊನೆಯವರೆಗೂ ಮುಂದುವರೆಸಿಕೊಂಡು ಹೋಗಬೇಕು ಎಂದರು. ರೋಗಿಗಳ ಸೇವೆ ದೇವರ ಸೇವೆಯಂತೆ ಈ ವೃತ್ತಿಯಲ್ಲಿ ಜನರು ನಿಮ್ಮನ್ನು ದೇವರಂತೆ ಕಾಣುತ್ತಾರೆ ಅದನ್ನು ಕಾಪಾಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ, ಒಬ್ಬ ಯಶಸ್ವಿ ವೈದ್ಯನಿಗೆ ತಾಳ್ಮೆ ಸಮಾಧಾನ ಮತ್ತು ನಗು ಅತಿ ಮುಖ್ಯ- ಸಮಾಧಾನ ನಮ್ಮನ್ನು ಮಾನಸಿಕವಾಗಿ ಬಲವಾಗಿಸುತ್ತದೆ, ಸಮಾಧಾನ ನಮ್ಮನ್ನು ಭಾವನಾತ್ಮಕವಾಗಿ ಬಲವಾಗಿಸುತ್ತದೆ, ಹಾಗೆ ಮುಖದ ಮೇಲಿನ ನಗು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ದಾವಣಗೆರೆ ವಿ ವಿ ಇಂದ ಗೌರವ ಡಾಕ್ಟರೇಟ್ ಪಡೆದ ಲೆಕ್ಕ ಸಂಶೋಧಕರಾದ ಡಾ. ಅಥಣಿ ವೀರಣ್ಣ ಅವರನ್ನು, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ ಜಿ ಈಶ್ವರಪ್ಪ ಅವರನ್ನು ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಾ. ಸಂಪನ್ನ ಮುತಾಲಿಕ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ನಂತರ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವನ್ನು ಮಾಡಲಾಯಿತು.
ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ವಿಶ್ವವಿದ್ಯಾನಿಲಯದ ರಾಯ್ಂಕ್ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಮೆಡಲುಗಳನ್ನು ನೀಡಲಾಯಿತು, ನಂತರ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಂತರ ಉಳಿದವರಿಗೆ ಪದವಿ ಪ್ರಧಾನವನ್ನು ಮಾಡಲಾಯಿತು.