2021 ರಿಂದ 2030 ರ ಅವಧಿಯನ್ನು ವಿಶ್ವ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ ಎಂದು ಘೋಷಿಸಿ – ನ್ಯಾಯವಾದಿ ಎಲ್.ಎಚ್. ಅರುಣ್ ಕುಮಾರ್ ಸಲಹೆ
ದಾವಣಗೆರೆ : ವಿಶ್ವಸಂಸ್ಥೆಯು 2021 ರಿಂದ 2030 ರ ಅವಧಿಯನ್ನು ವಿಶ್ವ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ ಎಂದು ಘೋಷಿಸಿದ್ದು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಎಚ್. ಅರುಣ್ ಕುಮಾರ್ ಸಲಹೆ ನೀಡಿದರು.
ಶನಿವಾರ ಅವರಗೆರೆ ಗ್ರಾಮದಲ್ಲಿ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ , ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ 2021 –ಕೋವಿಡ್ 19 ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆ ಕರೆಯ ಮೇರೆಗೆ ಇಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ವ್ಯವಸ್ಥೆ ಮರುಸ್ಥಾಪನೆ ಈ ವರ್ಷದ ಘೋಷ ವ್ಯಾಕ್ಯವಾಗಿದೆ. ದಿನಾಚರಣೆಯ ಮೂಲ ಉದ್ದೇಶ ಒಟ್ಟಾರೆ ನೈಸರ್ಗಿಕ ಪರಿಸರವನ್ನು ಅದರ ಮೂಲ ಸ್ಥಿತಿಗೆ ಕೊಂಡಯ್ಯದು ಮರು ಸ್ಥಾಪಿಸುವುದು.ಕರ್ನಾಟಕದ ಪಶ್ಚಿಮ ಘಟ್ಟಗಳಿಂದ ಹಿಡಿದು. ಬ್ರೇಜಿಲ್ ಅಮೆಜಾನ್‍ನಂತಹ ಜೀವ ವೈವಿದ್ಯದ ಆಧಾರಗಳು ಇಂದು ನಾಶವಾಗುತ್ತಿವೆ. ಜಗತ್ತಿನ 160 ಕೋಟಿ ಜನರ ಜೀವನ ಅರಣ್ಯಗಳ ಮೇಲೆ ಅವಲಂಭಿತವಾಗಿದೆ. ಪರಿಸರದ ಅಮೂಲ್ಯ ಸಂಪನ್ಮೂಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜೀವ ಜಗತ್ತು ಮತ್ತು ಮನುಷ್ಯ ಬದುಕಿಬಾಳಲು ನೈಸರ್ಗಿಕ ಸಂಪನ್ಮೂಲ ಮೂಲಾಧಾರವಾಗಿದೆ. ನಿಸರ್ಗ ನೀಡುವ ಗಾಳಿ ನೀರು ಅನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ. ಈ ಹಿನ್ನಲೆ ನೈಸರ್ಗಿಕ ಸಮತೋಲನ ಕಾಪಾಡುವುದು ಜಾಗತಿಕ ಸವಾಲಾಗಿದೆ. ವಿಶ್ವಸಂಸ್ಥೆಯು 2021 ರಿಂದ 2030 ರ ಅವಧಿಯನ್ನು ವಿಶ್ವ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ ಎಂದು ಘೋಷಿಸಿದ್ದು ಈ ಅವಕಾಶ ಬಳಸಿಕೊಳ್ಳಬೇಕಿದೆ ಎಂದರು.
ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆಯು ಗ್ರಾಮದಲ್ಲಿ 2 ಸಾವಿರ ಸಸಿ ನೆಟ್ಟು,ಪರಿಸರ ಸಂರಕ್ಷಣೆ ಮಹತ್ವದ ಕಾರ್ಯ ಮಾಡುತ್ತಿದೆ. ಅನುಕರಣೀಯ ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಪರಿಸರ ಸಂರಕ್ಷಣೆ ವೇದಿಕೆ ಅಧ್ಯಕ್ಷ ಗೀರೀಶ್ ದೇವರಮನೆ ಮಾತನಾಡಿ, ಪರಿಸರ ದಿನಾಚರಣೆ ಅರ್ಥಪೂರ್ಣ ಆಚರಣೆಯಾಗಿದ್ದು, ನದಿಮೂಲಗಳನ್ನು ಅರಣ್ಯಗಳನ್ನು ಹಾಗೂ ಜಲಚರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ಪ್ಲಾಸ್ಟಿಕ್ ಬಳಕೆಯಂತಹ ಅಪಾಯಕಾರಿ ವಸ್ತುಗಳ ಬಳಕೆ ನಿಲ್ಲಿಸಬೇಕು. ಮರಗಿಡ ನೆಡುವುದರ ಮೂಲಕ ಅವುಗಳನ್ನು ಸಂರಕ್ಷಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯ ಹೆಚ್.ಜಿ.ಉಮೇಶ್ ಮಾತನಾಡಿ, ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಬಸವ ಪರಿಸರ ವೇದಿಕೆ ಹಮ್ಮಿಕೊಂಡ ಕಾರ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ ನಾಯಕನಹಟ್ಟಿ ರುದ್ರಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗುರುಸಿದ್ದಸ್ವಾಮಿ, ಪರಿಸರ ವೇದಿಕೆ ಕಾರ್ಯದರ್ಶಿ ಬಾನಪ್ಪ, ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ ಸದಸ್ಯರು, ಆಶಾ ಕಾರ್ಯಕರ್ತರು ಇದ್ದರು.
ಕೋವಿಡ್ 19 ಜಾಗೃತಿ ಜಾಥಾದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ, ಸಾನಿಟೈಸರ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.