ಟಿಸಿಎಸ್ ಕಂಪನಿಗೆ ಜಿಎಂಐಟಿ ಕಾಲೇಜಿನ 31 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
ದಾವಣಗೆರೆ: ಪ್ರತಿಷ್ಠಿತ ಕಂಪನಿಯಾದ ಟಿಸಿಎಸ್ ಇತ್ತೀಚೆಗೆ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 31 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗದಿಂದ 10 ವಿದ್ಯಾರ್ಥಿಗಳು, ಇನ್ಫಾರ್ಮಶನ್ ಸೈನ್ಸ್ ವಿಭಾಗದಿಂದ 7 ವಿದ್ಯಾರ್ಥಿಗಳು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಿಂದ 11 ವಿದ್ಯಾರ್ಥಿಗಳು, ಮೆಕ್ಯಾನಿಕಲ್ ವಿಭಾಗದಿಂದ 2 ವಿದ್ಯಾರ್ಥಿಗಳು ಮತ್ತು ಬಯೋಟೆಕ್ನಾಲಜಿ ವಿಭಾಗದಿಂದ ಒಂದು ವಿದ್ಯಾರ್ಥಿ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ರೀತಿಯ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಕೈಗಾರಿಕಾ ಕೌಶಲ್ಯ ತೆಗಳ ತರಬೇತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಬುದ್ಧಿಮಟ್ಟ ಸುಧಾರಿಸುತ್ತಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಹತ್ತು ಹಲವು ಉತ್ಕೃಷ್ಟ ಕಂಪನಿಗಳು ಬರಲಿದ್ದು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ತಯಾರಿಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತಾಧಿಕಾರಿ ಶ್ರೀ ವೈ ಯು ಸುಭಾಶ್ಚಂದ್ರ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಪ್ರಾಧ್ಯಾಪಕ ವರ್ಗದವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.
ಜಿಎಂಐಟಿ ಕಾಲೇಜು ಒಟ್ಟು 83 ಕಂಪನಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಒಟ್ಟು 9 ಕಂಪನಿಗಳ ಸೆಂಟರ್ ಆಫ್ ಎಕ್ಸಲೆನ್ಸ್ ಹೊಂದಿದ್ದು, ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವರ್ಗದವರಿಗೆ ನೀಡಲಾಗುತ್ತಿದೆ.
ಕಾಲೇಜು, ಇತ್ತೀಚಿನ ಬೆಳವಣಿಗೆಯಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 4 ಸ್ಟಾರ್ ರೇಟಿಂಗ್ ನೊಂದಿಗೆ ಉತ್ತಮ ಸ್ಥಾನವನ್ನು ಹೊಂದಿದೆ. ಇದರಿಂದ ಕಾಲೇಜಿನ ಜವಾಬ್ದಾರಿಯೂ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ತಿಳಿಸಿದರು.