ಜಿಎಂಐಟಿ ಎಂಬಿಎ ವಿಭಾಗದ 35 ವಿದ್ಯಾರ್ಥಿಗಳು ಐಸಿಐಸಿಐ ಬ್ಯಾಂಕಿಗೆ ಆಯ್ಕೆ

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ 35 ವಿದ್ಯಾರ್ಥಿಗಳು ಐಸಿಐಸಿಐ ಬ್ಯಾಂಕ್ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂ ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕಿನ ವತಿಯಿಂದ ಸಂದರ್ಶನ ಪ್ರಕ್ರಿಯೆ ನಡೆಸಲು ನುರಿತ ಸಂಪನ್ಮೂಲ ವ್ಯಕ್ತಿಗಳ ತಂಡ ಭೇಟಿ ನೀಡಿ ಸಂದರ್ಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆಯ್ಕೆಯಾದ ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಳಗ್ಗೆಯಿಂದ ನಡೆದ ವಿವಿಧ ಸಂದರ್ಶನ ಪ್ರಕ್ರಿಯೆಯಲ್ಲಿ ಅರ್ಹ ವಿದ್ಯಾರ್ಥಿಗಳು ಭಾಗವಹಿಸಿ, ಕೊನೆಗೆ 35 ವಿದ್ಯಾರ್ಥಿಗಳು ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ 2 ಸ್ಥಾನಕ್ಕೆ, ವಾರ್ಷಿಕ 3.83 ಲಕ್ಷ ರೂಗಳ ವೇತನ ಶ್ರೇಣಿಯೊಂದಿಗೆ ಆಯ್ಕೆಯಾಗಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಎಂಬಿಎ ವಿದ್ಯಾರ್ಥಿಗಳಿಗೆ ಇನ್ನೂ ಹಲವು ಕಂಪನಿಗಳು ಮುಂದಿನ ದಿನಗಳಲ್ಲಿ ಸಂದರ್ಶನ ಪ್ರಕ್ರಿಯೆ ನಡೆಸಲಿದ್ದು, ಎಲ್ಲಾ ಅರ್ಹ ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದಾರೆ ಎಂದು ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ ಪ್ರಶಾಂತ ಕುಮಾರ್ ಓ ತಿಳಿಸಿದರು.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು, ಆಡಳಿತಾಧಿಕಾರಿಗಳಾದ ಶ್ರೀ ವೈ ಯು ಸುಭಾಷ್ ಚಂದ್ರ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ ಬಕ್ಕಪ್ಪ ಬಿ, ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.