ಹರಿಹರದಲ್ಲಿ ಶಿವಶಂಕರ್‌ಗೆ 3ನೇ ಸ್ಥಾನವೇ ಗತಿ: ಎಸ್.ರಾಮಪ್ಪ

ಹರಿಹರದಲ್ಲಿ ಶಿವಶಂಕರ್‌ಗೆ 3ನೇ ಸ್ಥಾನವೇ ಗತಿ: ಎಸ್.ರಾಮಪ್ಪ

ಹರಿಹರ: ತಾಲ್ಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಶಿವಶಂಕರ್ ಅವರಿಗೆ 3ನೇ ಸ್ಥಾನವೇ ಗತಿ ಎಂದು ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.

ಸೋಮವಾರ ನಗರದ ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಲ್ಲಿ 22 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು, ಮಾತನಾಡಿದರು.

ಮಗು ಚಿವುಟಿ, ತೊಟ್ಟಿಲು ತೂಗುವುದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರ ಕಾಯಕವಾಗಿದೆ ಅವರು ಎನೆಂಬುದು ಕ್ಷೇತ್ರದ ಜನತೆಗೆ ತಿಳಿದಿದೆ ಎಂದು ಹೇಳಿದರು.

ನಾಡಬಂದ್ ಷಾವಲಿ ದರ್ಗಾ ಎದುರಿನ ರಸ್ತೆ ಅಭಿವೃದ್ಧಿಗೆ ಬಿ.ಪಿ.ಹರೀಶ್ ಅಡ್ಡಿಯಾಗಿರುವುದು ಗೊತ್ತಿದ್ದರೂ ಶಿವಶಂಕರ್ ಅಲ್ಪಸಂಖ್ಯಾತರ ಓಲೈಕೆಗಾಗಿ ಮಗುವನ್ನೂ ಚಿವುಟುತ್ತಾ, ತೊಟ್ಟಿಲನ್ನೂ ತೂಗುತ್ತಿದ್ದಾರೆ ಎಂದು ಆರೋಪಿಸಿದರು.

ಬಿ.ಪಿ.ಹರೀಶ್ ಬಗ್ಗೆಯೂ ತಾಲ್ಲೂಕಿನ ಜನರಿಗೆ ತಿಳಿದಿದೆ. ಮುಂಬರುವ ಚುನಾವಣೆಯಲ್ಲಿ 2ನೇ, 3ನೇ ಸ್ಥಾನಗಳು ಅವರಿಗೆ ಖಾತ್ರಿಯಾಗಿವೆ ಎಂದರು.

ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ನಾನು ನಮ್ಮ ಪಕ್ಷದ ಮುಖಂಡರ ಮನೆಗೆ ಹೋಗದೆ ಬೇರೆಯವರ ಮನೆಗೆ ಹೋಗಬೇಕಾ? ಶಿವಶಂಕರ್ ಟಿಕೆಟಿಗಾಗಿ ದೆಹಲಿಯ ಮುಖಂಡರ ಮನೆ ಬಾಗಿಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕತ್ತೆ ಸತ್ತರೆ ಹಾಳು ಗುಂಡಿಗೆ ಎಸೆ ಎಂಬಂತೆ, ತಾಲ್ಲೂಕಿನಲ್ಲಿ ಜೆಡಿಎಸ್ ಸ್ಥಿತಿ ಇದೆ. ಅವರನ್ನು ಬಿಟ್ಟರೆ ಜೆಡಿಎಸ್‌ಗೆ ಗತಿಯಿಲ್ಲ. ಇವರಿಗೆ ಜೆಡಿಎಸ್ ಪಕ್ಷ ಬಿಟ್ಟರೆ ಬೇರೆ ಗತಿ ಇಲ್ಲ ಎಂಬಂತಾಗಿದೆ ಎಂದು ತಿರುಗೇಟು ನೀಡಿದರು.

ನಾನು ತಾಲ್ಲೂಕಿಗೆ ಎಷ್ಟು ಅನುದಾನ ತಂದಿದ್ದೇನೆ ಎಂದು ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ಎಚ್.ಎಸ್.ಶಿವಶಂಕರ್ ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದು ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.

ವಾರ್ಡ್ ಸದಸ್ಯ ಶಂಕರ್ ಖಟಾವ್‌ಕರ್ ಮಾತನಾಡಿದರು. ನಗರಸಭಾಧ್ಯಕ್ಷೆ ಶಾಹೀನಾ ದಾದಾಪೀರ್ ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!