40% ಭ್ರಷ್ಟಾಚಾರ ನಿಮ್ಮಂತಹ ಅಧಿಕಾರಿಗಳಿಂದ ಶುರು : ಕೊರೋನಾ ಟೈಂನಲ್ಲಿ ಮಾಡಬಾರದನ್ನು ಮಾಡಿದಿರಿ
ದಾವಣಗೆರೆ : ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದ್ದು, ಅದರಂತೆ ನೀವೆಲ್ಲರೂ ಕೆಲಸ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ಶೇ.40 ಪರ್ಸೆಂಟೇಜ್ ತರಬೇತಿ ನಿಮ್ಮಂತಹ ಅಧಿಕಾರಿಗಳಿಂದಲೇ ಶುರುವಾಗಿದ್ದು, ಇದೇ ಪರ್ಸೆಂಟೇಜ್ ಹಿಂದಿನ ಸರ್ಕಾರ ಬೀಳಲು ಕಾರಣವಾಗಿದ್ದು, ಇಂಥಹದೆಲ್ಲ ನಮ್ಮ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶನಿವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆಂದು ಹೇಳಿಕೊಂಡಿದ್ದೇವೆ. ಅದರಂತೆ ನೀವೆಲ್ಲರೂ ಸಹ ಕೆಲಸ ಮಾಡಬೇಕು. ನಮ್ಮ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕೆಲಸವಾಗಬೇಕು ಎಂದು ತಾಕೀತು ಮಾಡಿದರು. ಹಿಂದಿನ ಸರ್ಕಾರದ ಹಳೆಯದ್ದೆಲ್ಲಾ ಹೋಗಬೇಕು. ಹಳೆಯ ವಾತಾವರಣ, ಹಳೆ ಜಿಡ್ಡುಗಟ್ಟಿದ ವಾತಾವರಣ ಜಿಲ್ಲೆಯಿಂದ ಹೋಗಬೇಕು. ಹೊಸ ನೀರು ಬರಬೇಕು. ತಡವಾಗಿ ಮಳೆ ಶುರುವಾಗಿದ್ದು, ರೈತರು, ಗ್ರಾಮೀಣರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು.
ಜಿಲ್ಲಾದ್ಯಂತ ಬಿತ್ತನೆ ಕಾರ್ಯವೂ ಶುರುವಾಗಿದೆ. ರಸ್ತೆಗಳ ಅಭಿವೃದ್ಧಿ, ಸಣ್ಣಪುಟ್ಟ ಗುಂಡಿ ಮುಚ್ಚಿಸುವ ಕೆಲಸ ಪಿಡಬ್ಲ್ಯುಡಿ ತುರ್ತು ಕೆಲಸ, ಕಾರ್ಯಗಳು ಏನೇ ಇದ್ದರೂ ಆದ್ಯತೆ ಮೇಲೆ ಮಾಡಬೇಕು. ವಿದ್ಯುತ್ ಕಂಬ ದುರಸ್ಥಿ, ಟ್ರಾನ್ಸಫರಮ್ ಸಮಸ್ಯೆ, ಕಂಬಗಳ ಬದಲಾವಣೆ ಹೀಗೆ ಏನೇ ಇದ್ದರೂ ವಿದ್ಯುತ್ ಇಲಾಖೆ ಅಧಿಕಾರಿಗಳು ಆದ್ಯತೆ ಮೇಲೆ ಸ್ಪಂದಿಸಿ, ಕೆಲಸ ಮಾಡಿ ಎಂದು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾ ವಹಿಸಬೇಕು. ಅಽಕಾರಿಗಳು ಯಾವುದೇ ಗೊಂದಲ ಮಾಡಿಕೊಳ್ಳಬೇಡಿ. ಹಿಂದೆ ನಾವು ಆಡಳಿತ ನಡೆಸಿದಾಗ ರಾಜ್ಯಕ್ಕೆ ನಂಬರ್ 1, 2ನೇ ಸ್ಥಾನವನ್ನು ಜಿಲ್ಲೆಗೆ ತಂದಿದ್ದೆವು. ಅಧಿಕಾರಿಗಳು ಜನ ಪ್ರತಿನಿಧಿಗಳೊಂದಿಗೆ ಕೈಜೋಡಿಸಿದರೆ ಅದು ಸಾಧ್ಯ. ಕೇವಲ ಜನಪ್ರತಿನಿಧಿಗಳಿಂದಲೇ ಎಲ್ಲವೂ ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಕೃಷಿ ಹೀಗೆ ಎಲ್ಲಾ ಇಲಾಖೆಗಳೂ ಹೆಚ್ಚು ಒತ್ತು ನೀಡಿ. ಕೆಲಸ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀವೆಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಅವರು ಹೇಳಿದರು.
ವಾರಾಂತ್ಯದ ರಜೆ, ಭಾನುವಾರ ವಾರದ ರಜೆ, ಅಲ್ಲಿಗೆ ಹೋಗಬೇಕು, ಇಲ್ಲಿಗೆ ಹೋಗಬೇಕೆಂಬುದನ್ನೆಲ್ಲಾ ಬಿಟ್ಟು, ಜಿಲ್ಲೆಯಲ್ಲಿ ಅಗತ್ಯ ಕೆಲಸಗಳನ್ನು ನೀವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕು. ನಾವು ರಾಜಕಾರಣಿಗಳು, ಜನ ಪ್ರತಿನಿಽಗಳಿದ್ದೇವೆ. ಸರ್ಕಾ ರದ ಮಟ್ಟದಲ್ಲಿ ನಿಮ್ಮ ಕೆಲಸ ಸರ್ಕಾರಗಳಿದ್ದರೆ, ಸಣ್ಣಪುಟ್ಟ ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತಂದರೆ, ಅವುಗಳನ್ನು ಪರಿಹರಿಸುತ್ತೇವೆ. ನೀವೂ ಸಹ ಧೈರ್ಯದಿಂದ ಕೆಲಸ ಮಾಡಿ. ನಾವು, ಶಾಸಕರು, ನೀವು ಎಲ್ಲರೂ ಸೇರಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿಯೋಣ ಎಂದು ಅವರು ತಿಳಿಸಿದರು.
ತಹಸೀಲ್ದಾರ್, ಎಡಿಎಲ್‌ಆರ್, ತಹಸೀಲ್ದಾರ್‌ಗಳು ಗ್ರಾಮ ಠಾಣಾ ಬಗ್ಗೆ ಕ್ರಮ ಕೈಗೊಳ್ಳಬೇಕು. ಸುಮಾರು ಕಡೆಗಳಲ್ಲಿ ಇನ್ನೂ ಕೆಲಸ ಆಗಬೇಕಿದೆ. ಹರಪನಹಳ್ಳಿ ತಾ. ಕಂಚಿಕೇರಿ ರಸ್ತೆಯ ಹಿರಿಯೂರು ಕ್ಯಾಂಪ್ ಇತರೆ ಕಡೆ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಜನರಿಗೆ ಡೋರ್ ನಂಬರ್ ಕೊಟ್ಟಿಲ್ಲ, ಖಾತೆ ಮಾಡಿಕೊಟ್ಟಿಲ್ಲ. ತಕ್ಷಣ ಅಂತಹದ್ದಕ್ಕೆ ಸಮಸ್ಯೆ ಸರಿಪಡಿಸಿ. ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಲಿವೆ. ಜಿಲ್ಲಾಽಕಾರಿ, ಜಿಪಂ ಸಿಇಓ, ಉಪ ವಿಭಾಗಾಽಕಾರಿ, ತಹಸೀಲ್ದಾರರು ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಿ. ಸರ್ವೇ ಕೆಲಸ ಆಗಬೇಕು ಎಂದು ಎಸ್ಸೆಸ್ ಮಲ್ಲಿಕಾರ್ಜುನ ಸೂಚನೆ ನೀಡಿದರು.
ರೈತರಿಗೆ ಯಾವುದೇ ತೊಂದರೆ ಆಗಬಾರದು. ಒಳ್ಳೆಯ ಆಡಳಿತ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆ ಶಿಕ್ಷಣದಲ್ಲಿ 3ನೇ ಸ್ಥಾನ, ಅಭಿವೃದ್ಧಿ ಕಾರ್ಯದಲ್ಲಿ 2ನೇ ಸ್ಥಾನದಲ್ಲಿದ್ದೆವು. ಡಿಡಿಪಿಐ ಕಥೆ ಹೇಳುವುದು ಬೇಡ. ಕೆಲಸ ಆಗಬೇಕು. ಶಾಲಾ, ಕಟ್ಟಡಗಳ ಬಗ್ಗೆ ಕ್ಷೇತ್ರವಾರು ಮಾಹಿತಿ ತನ್ನಿ. ಹೆಚ್ಚುವರಿ ಅನುದಾನ ಬೇಕಿದ್ದರೆ ತರಿಸಿಕೊಳ್ಳಿ. ಆರೋಗ್ಯ ಇಲಾಖೆ ಸುಧಾರಣೆ ಆಗಬೇಕು. ತುಂಬಾ ಸುಮಾರು ಇದ್ದು, ಹಳೆಯದ್ದನ್ನು ಬಿಡಿ. ಕೊರೋನಾ ಟೈಂನಲ್ಲಿ ಮಾಡಬಾರದನ್ನು ಮಾಡಿದಿರಿ. ಬಡವರು ಬಡವರಾಗಿ ಉಳಿದರು, ಶ್ರೀಮಂತರು ಶ್ರೀಮಂತರಾದರು. ಎಲ್ಲವನ್ನೂ ಬಿಟ್ಟು ಸರಿಯಾಗಿಕೆಲಸ ಮಾಡಿ. ಲಸಿಕೆಯಿಂದ ಹಿಡಿದು, ಎಲ್ಲವನ್ನೂ ನೋಡಿದ್ದೇವೆ. ನಾವು ಕಣ್ಣಾರೆ ನೋಡಿದ್ದೇವೆ. ಡಯಾಲಿಸಿಸ್ ಯಂತ್ರಗಳನ್ನು ಪ್ರತಿ ತಾಲೂಕಿಗೂ ಕೊಡಿಸಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಿ.
ಕೊರೊನಾದಲ್ಲಿ ಜಿಲ್ಲಾಡಳಿತ ವಿಫಲ:
ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಜೀವ ಹೋಗಿದ್ದನ್ನೂ ನೋಡಿದ್ದೇವೆ. ಆಗ ಜಿಲ್ಲಾಡಳಿತ ಸಂಪೂರ್ಣ ವಿಫಲವಾಯಿತು. ಕೊರೋನಾ ವೇಳೆ ಜನರ ರೊಕ್ಕ ಹೊಡೆದರೆ ಉಳಿಯುತ್ತಾರಾ? ಗುಳಿಗೆ 300-400 ಗುಳಿಗೆ 3-4 ಸಾವಿರ ರು.ಗೆ ಮಾರಿಕೊಂಡಿರಲ್ರಿ? ಕಡೆಗೆ ತಲೆ ಕೆಡಿಸಿಕೊಂಡು, ನಾವೇ ತರಿಸಿಕೊಟ್ಟೆವು. ಬೇಕಂತಲೇ ಬ್ಯಾನ್ ಮಾಡಿದಿರಿ. ಇನ್ನು ಮೇಲಾದರೂ ತಿದ್ದಿಕೊಳ್ಳಿ. ಆಕ್ಸಿಜನ್ ಫ್ಲಾಂಟ್ ಗಳ ಬಗ್ಗೆನ ಹೇಳಿದರೆ ದಿನವಿಡೀ ಹೇಳುತ್ತೇನೆ. ಆಗಿ ಹೋಗಿದ್ದು, ತಿದ್ದಿಕೊಳ್ಳಿ. ಆಕ್ಸಿಜನ್ ಯೂನಿಟ್‌ಗಳದ್ದು ಯಾರದ್ದೋ ಗಂಟು, ಎಲ್ಲಮ್ಮನ ಜಾತ್ರೆ ಆಯ್ತು. ಆ ಟ್ರಸ್ಟ್ ಹೆಸರಿಗೆ ದುಡ್ಡು ತರುವುದು, ಆಕ್ಸಿಜನ್ ಯೂನಿಟ್ ಮೇಲೆ ಹೆಸರು ಹಾಕಿಕೊಳ್ಳುವುದು. ಜನರ ಜೀವದ ಜೊತೆಗೆ ಆಟವಾಡುತ್ತಾರಾ? ಡಯಾಲಿಸಿಲ್, ಸ್ಕಾನ್, ಎಂಆರ್‌ಐ, ಎಕ್ಸ್ ರೇ ತುರ್ತಾಗಿ ಸ್ಪಂದಿಸಿ. ಪ್ರತಿ ವಿಚಾರದ್ಲೂ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಹಿಂದೆ 28 ಕೋಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಜೂರು ಮಾಡಿಸಿದ್ದೆ. ಅದನ್ನು ಡೈವರ್ಟ್ ಮಾಡಿದರು. ಅದನ್ನಾದರೂ ತನ್ನಿ. ಸ್ವಲ್ಪ ಪುಣ್ಯ ಕಟ್ಟಿಕೊಳ್ಳಿರಪ್ಪ. ಅದೇನಿದೆ ತನ್ನಿ. ನಾನು ಮಾಡಿಸುತ್ತೇನೆ. ಮಂಜೂರು ಮಾಡಿಸುತ್ತೇನೆ. ರೆಫರೆನ್ಸ್ ಸಹ ವಿಳಂಬವಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ವಿಳಂಬವಾಗುತ್ತಿದೆ. ಅದು ಆಗಬಾರದು. ಆಟವಾಡಬೇಡಿ, ಬೇಗ ಮುಗಿಸಿಕೊಡಿ.
ಎಸ್ ಎಸ್ ಮಲ್ಲಿಕಾರ್ಜುನ ‘ಟೈಗರ್’ – ಶಾಸಕ ದೇವೇಂದ್ರಪ್ಪ
ಕೆಡಿಪಿ ಸಭೆ ನಡೆಯುವ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಅಧೀನ ಇಲಾಖೆಗಳ ಕಾರ್ಯಕ್ರಮಗಳ ವರದಿಯನ್ನು ಒಪ್ಪಿಸುತ್ತಿದ್ದರು, ಇದೇ ವೇಳೆ ಆಹಾರ ಇಲಾಖೆ ಉಪ ನಿರ್ದೇಶಕರು ಜಗಳೂರು ತಾಲ್ಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮಾಹಿತಿ ತಿಳಿಸುತ್ತಿರುವಾಗ ನೋಡಿ, ‘ಇಲ್ಲಿ ಕೂತಿರೋದು ಟೈಗರ್’ ನಿಮ್ಮ ಆಟಗಳು ನಡೆಯುವುದಿಲ್ಲ ಹಾಗೂ ಹುಷಾರಾಗಿ ಕೆಲಸ ಮಾಡಿ ಎಂದು ಜಗಳೂರು ಶಾಸಕ ದೇವೇಂದ್ರಪ್ಪ ಹೇಳಿದರು.
ಶಾಸಕರಾದ ಕೆ.ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ, ದೇವೇಂದ್ರಪ್ಪ, ಬಿ.ಪಿ.ಹರೀಶ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಪಂ ಸಿಇಓ ಸುರೇಶ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಇತರರು ಇದ್ದರು.