40 ಭಯೋತ್ಪಾದಕರು ಇಮ್ರಾನ್ ಖಾನ್ ನಿವಾಸದಲ್ಲಿ-ಒಪ್ಪಿಸಲು 24 ಗಂಟೆ ಕಾಲಾವಕಾಶ

ಲಾಹೋರ್: 30–40 ಭಯೋತ್ಪಾದಕರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಲಾಹೋರ್ ನಿವಾಸದಲ್ಲಿ ಅಡಗಿದ್ದಾರೆ ಎಂದು ಆರೋಪಿಸಿರುವ ಪಂಜಾಬ್‌ನ ಮಧ್ಯಂತರ ಸರ್ಕಾರವು, ಅವರನ್ನು 24 ಗಂಟೆಗಳಲ್ಲಿ ನಮಗೆ ಒಪ್ಪಿಸಿ ಅಥವಾ ನಿರ್ದಾಕ್ಷಿಣ್ಯ ಕ್ರಮವನ್ನು ಎದುರಿಸಿ ಎಂದು ಎಚ್ಚರಿಸಿದೆ.
ಮಾರ್ಚ್‌ನಲ್ಲಿ ಖಾನ್ ಬಂಧನಕ್ಕೆ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ನಿವಾಸಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಅವರಿಗೆ ತೆಹ್ರೀಕ್–ಇ–ಇನ್‌ಸಾಪ್ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು.
ಮೇ 9ರಂದು ಮಿಲಿಟರಿ ನೆಲೆಗಳು ಮತ್ತು ವಿಶೇಷವಾಗಿ ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್ ಮೇಲೆ ದಾಳಿ ಮಾಡಿದ್ದ 30ರಿಂದ 40 ಮಂದಿ ಉಗ್ರರು ಇಮ್ರಾನ್ ಖಾನ್ ನಿವಾಸದಲ್ಲಿ ಅಡಗಿರುವ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಬಂದಿದೆ. ಅವರನ್ನು ನಮಗೆ ಒಪ್ಪಿಸಲು ಇಮ್ರಾನ್ ಖಾನ್ ಮತ್ತು ಅವರ ಪಕ್ಷಕ್ಕೆ 24 ಗಂಟೆಗಳ ಗಡುವು ವಿಧಿಸಲಾಗಿದ್ದು, ತಪ್ಪಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿರುವುದಾಗಿ ಪಂಜಾಬ್‌ನ ಹಂಗಾಮಿ ಮಾಹಿತಿ ಸಚಿವ ಅಮೀರ್ ಮಿರ್ ಹೇಳಿದ್ದಾರೆ.
ಈ ಆದೇಶವನ್ನು ಗಂಭೀರವಾಗಿ ಪರಿಗಣಿಸಿ, ನಿಮ್ಮ ಮನೆಯಿಂದ ಭಯೋತ್ಪಾದಕರನ್ನು ಬಂಧಿಸುವ ಅಧಿಕಾರ ತನಿಖಾ ಸಂಸ್ಥೆಗಳಿಗೆ ಇದೆ ಎಂದು ಅವರು ಇಮ್ರಾನ್ ಖಾನ್ ಅವರನ್ನು ಎಚ್ಚರಿಸಿದ್ದಾರೆ.