ಎಲ್ಲಾ ರೀತಿಯ ಜಾತಿ ಜನಾಂಗಕ್ಕೆ ಸಚಿವ ಸ್ಥಾನ ಸಿಕ್ಕಿದೆ: ಕೆಲವು ಕಡೆ ಅಸಮಾಧಾನವಿದೆ ಸರಿಪಡಿಸುತ್ತೆವೆ – ಬೈರತಿ ಬಸವರಾಜ್

ದಾವಣಗೆರೆ: ನಾನು ಇಂತಹದ್ದೇ ಖಾತೆಯನ್ನು ನೀಡಿ ಎಂದು ಕೇಳಿಲ್ಲ. ಯಾವ ಖಾತೆಯನ್ನು ನೀಡಿದರೂ ನಿಭಾಯಿಸಲು ಸಮರ್ಥನಾಗಿದ್ದು, ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ಜನರ ಕಷ್ಟಗಳನ್ನು ತಿಳಿಯಲು ರಾಜ್ಯ ಪ್ರವಾಸ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದು, ಈ ಹಿನ್ನಲೆ ಪ್ರತಿಯೊಬ್ಬರು ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ತಾವು ದಾವಣಗೆರೆ ಜಿಲ್ಲೆಯ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು.
ಯಾವಾಗ ಖಾತೆ ಹಂಚಿಕೆ ಮಾಡಬೇಕು ಎಂದು ಸಿಎಂ ನಿರ್ಧಾರ ಮಾಡುತ್ತಾರೆ. ಖಾತೆ ನೀಡುವುದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಇಂತಹದ್ದೇ ಖಾತೆ ಕೊಡಿ ಎಂದು ನಾನು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಸಚಿವ ಸ್ಥಾನ ಸಿಗುವ ಅವಕಾಶ ಇರೋದಿಲ್ಲ. ಈ ಸಂದರ್ಭದಲ್ಲಿ ಅಸಮಾಧಾನ ಉಂಟಾಗುವುದು ಸಾಮಾನ್ಯ. ಅವುಗಳನ್ನು ಸರಿಪಡಿಸಿ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ ಎಂದರು.
ಕ್ಯಾಬಿನೆಟ್ ನಲ್ಲಿ ಅತ್ಯುತ್ತಮ ವಾದ ನಿರ್ಧಾರ ಕೈಗೊಂಡಿದ್ದಾರೆ. ನಾಯಕ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಮಾಡಲಾಗಿದೆ. ಮಹಿಳೆಯರಿಗೆ ಪ್ರಮುಖವಾಗಿ ಪ್ರತಿನಿಧ್ಯತೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಜಿಲ್ಲೆಯಲ್ಲಿ ಯಾವ ಶಾಸಕರು ಕೂಡ ಅಸಮಾಧಾನಗೊಂಡಿಲ್ಲ. ಎಲ್ಲಾ ಶಾಸಕರನ್ನು ಮಾತನಾಡಿಸಿ, ಶಾಸಕ ಎಸ್ ಎ ರವೀಂದ್ರನಾಥ್ ಆಶೀರ್ವಾದ ಕೂಡ ಪಡೆದುಕೊಂಡು ಬಂದಿದ್ದೇನೆ. ರೇಣುಕಾಚಾರ್ಯಗೆ ಅನಾರೋಗ್ಯದ ಕಾರಣ ಹೊನ್ನಾಳಿ ಪ್ರವಾಸ ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಹೊನ್ನಾಳಿಗೂ ಭೇಟಿ ನೀಡುತ್ತೇನೆ ಎಂದರು.
ಶಾಸಕ ಜಮೀರ್ ಮೇಲೆ ಐಟಿ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರು ತಪ್ಪು ಮಾಡಿದ್ದಾರೋ ಅವರನ್ನು ತನಿಖೆ ಮಾಡಲು ಇಲಾಖೆ, ತಂಡ ಇದೆ. ಯಾರು ತಪ್ಪು ಮಾಡ್ತಾರೋ ಅವರನ್ನು ತನಿಖೆ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬೈರತಿ, ಬಿಜೆಪಿಯಲ್ಲಿ ಯಾರಾದರೂ ಅಂತವರು ಇದ್ದರೆ ಪಟ್ಟಿ ಬಿಡುಗಡೆ ಮಾಡಲಿ. ಯಾರು ತಪ್ಪು ಮಾಡಿದರೆ ಅವರ ಮೇಲೆ ದೂರು ನೀಡಲಿ ಎಂದರು.
ಎಲ್ಲಾ ರೀತಿಯ ಜಾತಿ ಜನಾಂಗಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಕೆಲವೊಂದು ಕಡೆ ಅಸಮಾಧಾನವಾಗಿದೆ ಸರಿಪಡಿಸಬೇಕಿದೆ ಎಂದರು.