ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣಾದ ಸರ್ಕಾರಿ ನೌಕರರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್‌ಟಿ ಪರೀಕ್ಷೆ) ಉತ್ತೀರ್ಣರಾಗಿರಲೇ ಬೇಕೆಂದು ಸರ್ಕಾರ ನಿಗಧಿ ಪಡಿಸಿದ್ದ ಗಡುವು ವಿಸ್ತರಿಸಿದ ಬೆನ್ನಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನೌಕರರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಿದೆ.
ಕರ್ನಾಟಕ ಸಿವಿಲ್ ಸೇವಾ ನಿಯಮಗಳು ಜಾರಿಗೆ ಬಂದ 22.03.2012ರಂದು ಸೇವೆಯಲ್ಲಿದ್ದು, ದಿ.17.04.2021ರೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ನೌಕರರಿಗೆ ಈ ಪ್ರೋತ್ಸಾಹ ಧನ ದೊರೆಯಲಿದೆ.
ಈ ಪ್ರೋತ್ಸಾಹ ಧನ ನೀಡುವ ಕುರಿತು 2012ರ ಆದೇಶದಲ್ಲಿ ತಿಳಿಸಲಾಗಿತ್ತಾದರೂ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕುರಿತು ಪ್ರಮಾಣ ಪತ್ರ ನೀಡುವಲ್ಲಿ ಗೊಂದಲ ಉಂಟಾಗಿದ್ದರಿಂದ 2017ರಲ್ಲಿ ಇದಕ್ಕೆ ತಡೆ ನೀಡಲಾಗಿತ್ತು. ಈದೀಗ ಪ್ರಮಾಣ ಪತ್ರ ವಿತರಿಸಲು ಇ ಆಡಳಿತ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸರ್ಕಾರ ಸೂಚಿಸಿದ್ದು, ಡಿಜಿಟಲ್ ಸಹಿ ಮಾಡಲ್ಪಟ್ಟ ಪ್ರಮಾಣ ಪತ್ರ ಒದಗಿಸಲಾಗುತ್ತಿದೆ. ಹೀಗಾಗಿ ಪ್ರೋತ್ಸಾಹ ಧನ ನೀಡುವಲ್ಲಿದ್ದ ಗೊಂದಲ ಬಗೆಹರಿದಂತಾಗಿದೆ.
ಸಾಕ್ಷರತಾ ಪರೀಕ್ಷೆ ಪ್ರಮಾಣ ಪತ್ರವನ್ನು ಪರಿಶೀಲಿಸಿ ಉತ್ತೀರ್ಣರಾದ ದಿನಾಂಕ ಖಚಿತಪಡಿಸಿಕೊಂಡು ಪ್ರೋತ್ಸಾಹ ಧನ ಮಂಜೂರು ಮಾಡಬೇಕೆಂದು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಈ ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ಪಡೆಯುವ ವೇತನದ ಲೆಕ್ಕ ಶೀರ್ಷಿಕೆಯಡಿ Subsidiary expenses ಉಪ ಶೀರ್ಷಿಕೆಯಡಿ ಭರಿಸುವಂತೆ ಸೂಚಿಸಲಾಗಿದೆ.