ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿಗಾಗಿ ಸುವರ್ಣ ಸೌಧ ಬಳಿ ಹೆದ್ದಾರಿ ತಡೆದು ಪ್ರತಿಭಟನೆ.! ಹಲವರು ಪೊಲೀಸ್ ವಶಕ್ಕೆ

sc st 1

ಬೆಳಗಾವಿ: ಡಿ.16. ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ನೀಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿದ ವರದಿ ಜಾರಿ ಮಾಡಬೇಕು. ಜೊತೆಗೆ ತ್ರಿ ಸದಸ್ಯ ಸಮಿತಿಯಿಂದ ಶೇ.7.5 ಮೀಸಲಾತಿ ವಿಚಾರ ಹೊರಗಿಡಬೇಕು ಎಂದು ಆಗ್ರಹಿಸಿ ರಾಜ್ಯದ ನಾಯಕ ಸಮಾಜದ ಸಮಾನ ಮನಸ್ಕರು ಬೆಳಗಾವಿ ಸುವರ್ಣ ಸೌಧದ ಎದುರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಬೆಳಗಾವಿ ಸುವರ್ಣ ಸೌಧದ ಮುಂಭಾಗ ಜಮಾಯಿಸಿದ ನೂರಾರು ವಾಲ್ಮೀಕಿ ಸಮುದಾಯದ ಸಾಮಾನ್ಯ ಜನರು ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದರು. ಆದರೆ ಅದಕ್ಕೆ ಅಡ್ಡಿಪಡಿಸಿದಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳಕ್ಕೆ ಆಗಮಿಸಬೇಕು. ನಮ್ಮ ಮನವಿ ಸ್ವೀಕಾರ ಮಾಡಬೇಕು. ಜೊತೆಗೆ ಸದನದಲ್ಲಿ ಶೇ.7.5 ಮೀಸಲಾತಿ ವಿಚಾರ ಚರ್ಚೆಗೆ ಅವಕಾಶ ನೀಡಿ, ಅಂತಿಮವಾಗಿ ತ್ರಿಸದಸ್ಯ ಸಮಿತಿಯಿಂದ ಮೀಸಲಾತಿ ವಿಚಾರ ಹೊರಗಿಡಬೇಕು. ಹಾಗೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಕ್ಷಣ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದರು. ಆಗ ಪೊಲೀಸರು ಹಾಗೂ ಚಳವಳಿಗಾರರ ನಡುವೆ ಮಾತಿನಚಕಮಕಿ ನಡೆಯಿತು.

ರಾಜ್ಯ ಸರ್ಕಾರ ಪರಿಶಿಷ್ಟ ವರ್ಗವನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಿದೆ. ಜೊತೆಗೆ ನಾಯಕ ಸಮಾಜದ 17 ಶಾಸಕರಿದ್ದರೂ ಸದನದಲ್ಲಿ ಧ್ವನಿ ಎತ್ತುತ್ತಿಲ್ಲ. ಈ ರೀತಿ ಜಾಣ ಮೌನವನ್ನು ಸಹಿಸುವುದಿಲ್ಲ. ನಮಗೆ ತಕ್ಷಣ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಲೇಬೇಕು. ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ವಾಲ್ಮೀಕಿ ಪ್ರಶಸ್ತಿ ವಿಜೇತ ಹೋರಾಟಗಾರ ಮಾರೆಪ್ಪ ನಾಯಕ್, ರಮೇಶ್ ಹಿರೇಜಂಬೂರು, ಚಳವಳಿ ರಾಜಣ್ಣ, ವಿಜಯ್ ತಳವಾರ ಮತ್ತಿತರರು ಆಗ್ರಹಿಸಿದರು.

ಈ ವೇಳೆ ರಸ್ತೆ ತಡೆಯಿಂದ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡಚಣೆಯಾದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ಸಮಯದಲ್ಲಿ ಐದಾರು ಮಹಿಳೆಯರು ಹಾಗೂ ಹೋರಾಟಗಾರರಿಗೆ ಸಣ್ಣಪುಟ್ಟ ಗಾಯಗಳಾದವು.

ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ರಾಜ್ಯಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಶುಭಾ ವೇಣುಗೋಪಾಲ್, ನಾಗವೇಣಿ, ಶ್ರೀನಿವಾಸ ನಾಯಕ್, ಮಂಜುಳಾ ಶ್ರೀನಿವಾಸ್, ಪ್ರಕಾಶ್ ನಾಯಕ್, ಭರತ್ ನಾಯಕ್, ಕುಪ್ಪೂರು ಶ್ರೀಧರ್, ಶ್ರೀಕಾಂತ್ ನಾಯಕ್,  ಸೇರಿದಂತೆ ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಹುಬ್ಬಳಿ-ಧಾರವಾಡ, ಕೋಲಾರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಯ ನಾಯಕ ಸಮುದಾಯದ ಸಮಾನ ಮನಸ್ಕರು ಭಾಗಸಿದ್ದರು.

Leave a Reply

Your email address will not be published. Required fields are marked *

error: Content is protected !!