ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತವು 9.53 ಕೋಟಿ ಲಾಭ – ಛೇರ್ಮನ್ ಐ.ಪಿ.ಮಲ್ಲಿಕಾರಾಧ್ಯ

ದಾವಣಗೆರೆ: ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತವು ೯.೫೩ ಕೋಟಿ ರು., ಲಾಭ ಗಳಿಸಿದೆ ಎಂದು ಸ್ಥಳೀಯ ಆಡಳಿತ ಮಂಡಳಿಯ ಛೇರ್ಮನ್ ಐ.ಪಿ.ಮಲ್ಲಿಕಾರಾಧ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹುಟ್ಟೂರು ಅಂಕಲಿಯಲ್ಲಿ ೭ ಜನ ಆಡಳಿತ ಮಂಡಳಿಯೊಂದಿಗೆ ೨೫೭ ಸಹಕಾರಿ ಸದಸ್ಯರು, ೧,೭೧,೦೫೯ ರು., ಠೇವಣಿಯೊಂದಿಗೆ ಪ್ರಾರಂಭ ಮಾಡಲಾಯಿತು. ಈಗ ರಾಜ್ಯದ್ಯಾಂತ ೪೬ ಶಾಖೆಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಕಳೆದ ೨೦೨೧ರ ಮಾ.೩೧ಕ್ಕೆ ಸಹಾಕಾರಿ ಠೇವಣಿ ೧೧೦೦ ಕೋಟಿ, ಸಾಲಗಳು ೮೬೪ ಕೋಟಿಗಳಷ್ಟಿದೆ. ಸಹಕಾರಿಯ ಲಾಭ ೯.೫೩ ಕೋಟಿ ರು., ಗಳಾಗಿದೆ. ದಾವಣಗೆರೆ ಶಾಖೆಯು ಇಂದಿಗೆ ಪ್ರಾರಂಭವಾಗಿ ನಾಲ್ಕು ವರ್ಷವಾಯಿತು. ಈ ನಾಲ್ಕನೇ ವರ್ಷದ ಅವಧಿಯಲ್ಲಿ ೮೬ ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ೭೦ ಕೋಟಿ ರು., ಸಾಲ ವಿತರಿಸಲಾಗಿದೆ. ಸದಸ್ಯರ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ವಾಹನಗಳ ವಿಮೆ ಮತ್ತು ಜೀವ ವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯ ನೀಡಲಾಗಿದೆ. ಅಲ್ಲದೇ ಶೀಘ್ರವೇ ಇ-ಸ್ಟಾಂಪಿಂಗ್, ಲಾಕರ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಶಾಖೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅಂಕಲಿಯಲ್ಲಿ ಈಚೆಗೆ ಜರುಗಿತು. ಕಾರ್ಯವ್ಯಾಪ್ತಿಯನ್ನು ವೃದ್ಧಿಸುವ ಕಾರಣ ಬಹುರಾಜ್ಯ ಸಹಕಾರಿ ಕಾಯ್ದೆಯನ್ನು ಅಳವಡಿಸುವ ಬಗ್ಗೆ ಬರುವ ಡಿ. ೧೮ ರಂದು ನಡೆಯುವ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಎಸ್.ಹೆಚ್.ಕಲ್ಲೇಶಪ್ಪ, ಸುನೀಲ್ ಕಾನಡೆ, ಎನ್.ಕೆ.ಕೊಟ್ರೇಶ್, ಸಂಗಮೇಶ್ ಉರಿಕಡ್ಲಿ ಮತ್ತಿತರರಿದ್ದರು.