ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಮೇಯರ್ ಎಸ್ ಟಿ ವಿರೇಶ್.!? ಬಿಜೆಪಿ ಪಕ್ಷ ವಿರೇಶ್ ಗೆ ಜವಾಬ್ದಾರಿ ನೀಡುತ್ತಾ.!?

ದಾವಣಗೆರೆ: ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ದಾವಣಗೆರೆ ಉತ್ತರದಿಂದ ಸ್ಪರ್ಧಿಸುತ್ತೇನೆ. ಪಕ್ಷ ಏನೆ ಜವಾಬ್ದಾರಿ ಕೊಟ್ಟರು ಅದನ್ನು ನಿಭಾಯಿಸುತ್ತೇನೆ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಚೆನ್ನಾಗಿಯೇ ನಿಭಾಯಿಸುತ್ತೇನೆ. ಒಂದು ವೇಳೆ ಶಾಸಕ ಅಭ್ಯರ್ಥಿ ಸ್ಥಾನಕ್ಕೆ ಪಕ್ಷ ಟಿಕೇಟ್ ನೀಡಿದರೆ ಸ್ಪರ್ಧಿಸುತ್ತೇನೆ. ಪಕ್ಷದ ನಿರ್ಧಾರವೇ ಅಂತಿಮ ಎಂದರು.
ಮಹಾನಗರಕ್ಕೆ ಹೊಂದಿಕೊಂಡಂತೆ ಇರುವ ಆರೂವರೆ ಎಕರೆ ವಿಶಾಲ ಜಾಗದಲ್ಲಿ ಬೃಹತ್ ಸೈನಿಕರ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಈ ಕುರಿತಂತೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಂದಾಜು ವೆಚ್ಚ, ನೀಲ ನಕ್ಷೆಯನ್ನು ಸಿದ್ದ ಪಡಿಸಲಾಗುತ್ತಿದೆ ಎಂದು ಹೇಳಿದರು.
ನಗರದ ಲೋಕಿಕರೆ ರಸ್ತೆಯಲ್ಲಿ ಬರುವ ಟಿವಿ ಸ್ಟೇಷನ್ ಕೆರೆ ಸಮೀಪದ ಎಸ್.ಎ.ರವೀಂದ್ರನಾಥ್ ಬಡಾವಣೆ ಬಳಿಯ ವಿಸ್ತಾರ ಜಾಗದಲ್ಲಿ ಸೈನಿಕರ ಉದ್ಯಾನವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಚಿತ್ರದುರ್ಗದ ಮುರುಘಾಮಠ, ಶಿಗ್ಗಾಂವ್ ಬಳಿಯ ರಾಕ್ ಗಾರ್ಡನ್‌ಗಳಂತೆ ಇಲ್ಲಿಯೂ ಸೈನಿಕರು, ಜನಪದ, ಹಳ್ಳಿಯ ಸೊಗಡು ಕುರಿತಂತೆ ಶಿಲ್ಪಕಲೆ, ಕಲಾಕೃತಿಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಸೇನೆ ಸೇರಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಉದ್ಯಾನವನದಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆ, ತರಬೇತಿ, ವಿವಿಧ ಸಾಹಸ ದೃಶ್ಯಗಳು ಸೇರಿದಂತೆ ವಿವಿಧ ರೀತಿಯ ಕಲಾಕೃತಿ ನಿರ್ಮಿಸಲಾಗುವುದು. ಅಲ್ಲದೇ, ಯುವಪೀಳಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಭಾಂಗಣ ನಿರ್ಮಿಸಿ, ಅದರಲ್ಲಿ ದೇಶಭಕ್ತಿಯ ಹಾಡುಗಳು, ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಒಟ್ಟಿನಲ್ಲಿ ಸೈನ್ಯದ ಬಗ್ಗೆ ಗೌರವ ನೀಡುವ ನಿಟ್ಟಿನಲ್ಲಿ ಈ ಉದ್ಯಾನವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಪ್ರಸನ್ನಕುಮಾರ್, ಕೆ.ಎಂ.ವೀರೇಶ್ ಸೇರಿದಂತೆ ಇತರರು ಇದ್ದರು.