ಶೇ.70 ರಷ್ಟು ಕನ್ನಡ ಬಳಸದಿದ್ದರೆ ಅಂತಹ ವ್ಯಾಪಾರಸ್ಥರಿಗೆ ದಂಡ, ವ್ಯಾಪಾರ ಪರವಾನಿಗೆ ರದ್ಧು – ಮೇಯರ್ ಎಸ್.ಟಿ. ವೀರೇಶ್ ಎಚ್ಚರಿಕೆ

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿರುವ ವ್ಯಾಪಾರಸ್ಥರು ನಾಮಫಲಕಗಳಲ್ಲಿ ಶೇ.70 ರಷ್ಟು ಸರಕಾರದ ಆದೇಶದನ್ವಯ ಕನ್ನಡ ಬಳಸದಿದ್ದರೆ ಅಂತಹ ವ್ಯಾಪಾರಸ್ಥರಿಗೆ ದಂಡ ಹಾಕಿ, ವ್ಯಾಪಾರ ಪರವಾನಿಗೆ ರದ್ಧು ಮಾಡಲಾಗುತ್ತದೆ ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಎಚ್ಚರಿಕೆ ನೀಡಿದ್ದಾರೆ.
ಆಯುಕ್ತರು, ಅಧಿಕಾರಿಗಳು ಮತ್ತು ಸದಸ್ಯರ ತಂಡದೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಿ, ಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸುವ ಕುರಿತು ನಡೆಸಲಾದ ಜಾಗೃತಿ ಅಭಿಯಾನ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವ್ಯಾಪಾರಸ್ಥರಿಗೆ ಇದು ಕೊನೆಯ ಅವಕಾಶವಾಗಿದ್ದು, ಒಂದು ವಾರದೊಳಗಡೆ ಆಂಗ್ಲ ಭಾಷೆ ಇರುವ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ಭಾಷೆ ಇರುವ ನಾಮಫಲಕ ಬಳಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಒಂದು ವಾರದ ಗಡುವು ನೀಡಿದರು.
ಸರಕಾರ ಶೇ.೭೦ ರಷ್ಟು ಕನ್ನಡವನ್ನು ಬಳಸಬೇಕೆಂದು ಕಡ್ಡಾಯಗೊಳಿಸಿದೆಯಾದರೂ ವ್ಯಾಪಾರಸ್ಥರು ನಾಮಫಲಕಗಳಲ್ಲಿ ಇಂಗ್ಲೀಷ್ ಸೇರಿದಂತೆ ಇತರೆ ಭಾಷೆಗಳನ್ನು ಬಳಸುತ್ತಿದ್ದಾರೆ ಎಂದು ಹಲವು ಸಂಘಟನೆಗಳು ದೂರು ನೀಡಿದ್ದವು. ಆ ಹಿನ್ನೆಲೆಯಲ್ಲಿ ಕನ್ನಡ ಜಾಗೃತಿ ಅಭಿಯಾನ ಶುರು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಕೆ.ಎಂ. ವೀರೇಶ್, ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಅಧಿಕಾರಿಗಳ ತಂಡ ಉಪಸ್ಥಿತವಿತ್ತು.