ಕನ್ನಡಿಗರ ಸ್ವಾಭಿಮಾನ ಕೆಣಕುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಿ: ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಕನ್ನಡಿಗರ ಸ್ವಾಭಿಮಾನ ಕೆಣಕುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಂಘಟನೆ ನಿಷೇಧಿಸಿ, ಮುಖಂಡರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ,ಇತ್ತೀಚಿಗೆ ಕನ್ನಡಿಗರನ್ನು ಮತ್ತು ಸರಕಾರವನ್ನು ಕೆಣಕುತ್ತಿರುವ ಎಂಇಎಸ್ ಸಂಘಟನೆಯ ಪುಂಡರು ಬೆಳಗಾವಿಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮರಾಠಿ ಮಹಾಮೇಳ ನಡೆಸಲು ಮುಂದಾಗಿದ್ದಾಗ, ಕನ್ನಡಪರ ಹೋರಾಟಗಾರರು ಎಂಇಎಸ್ ಪುಂಡರಿಗೆ ಮಸಿ ಬಳಿಯುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಕೊಲೆ ಕೇಸು ದಾಖಲು ಮಾಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಎಂಇಎಸ್‌ನ ಒಂದೆಡೆ ದೂರುತ್ತದೆ ಮತ್ತೊಂದೆಡೆ ಬೆಂಬಲಿಸುತ್ತಿದೆ ಈ ಇಬ್ಬಗೆಯ ನೀತಿ ಸರಿಯಲ್ಲ. ಎಂಇಎಸ್ ಪುಂಡರಿಗೆ ಮಸಿ ಬಳಿದು ತಕ್ಕ ಉತ್ತರ ನೀಡಿರುವ ರಾಜ್ಯದ ಹೋರಾಟಗಾರರ ಮೇಲೆ ಕೊಲೆ ಕೇಸು ದಾಖಲಿಸಿ, ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ತಕ್ಷಣ ಸರ್ಕಾರ ಕನ್ನಡ ಹೋರಾಟಗಾರರ ಮೇಲೆ ಹಾಕಿರುವ ಕೊಲೆ ಕೇಸನ್ನು ಹಿಂಪಡೆಯಬೇಕು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಯನ್ನು ರಾಜ್ಯದಿಂದ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಅಧ್ಯಕ್ಷರಾದ ಬಸಮ್ಮ, ಮಂಜುಳ ಮಾಂತೇಶ್, ಶಾಂತಮ್ಮ, ಮಂಜುಳಮ್ಮ, ಹೇಮಲತಾ, ಸರೋಜಮ್ಮ, ಸುಜಾತ, ಸಾಕಮ್ಮ, ಅಮಿದ್ ಬಾನು, ಗೋಪಾಲ್ ದೇವರಮನೆ, ಸಂತೋಷ್, ಮೋಹನ್, ಕೆ.ಜಿ ಬಸರಾಜ್, ಇರ್ಫಾನ್, ಜಬಿವುಲ್ಲಾ, ಮಹೆಬೂಬ್, ಇಂತಿಯಾಜ್, ಅಬ್ಜಲ್, ಖಲೀಲ್, ಪರಮೇಶ್. ಎನ್.ಟಿ. ಹನುಮಂತಪ್ಪ, ಎನ್.ಬಿ.ಎ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.