ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಗುರುವಾರ ಮಂಡಿಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಖಾಸಗೀಕರಣದಿಂದ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದ್ದು, ಬ್ಯಾಂಕ್ ಖಾಸಗೀಕರಣವು ದೇಶದ ಹಿತಾಸಕ್ತಿಗೆ ಮಾರಕವಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸುಧಾರಣೆಯ ನೆಪದಲ್ಲಿ ಬ್ಯಾಂಕುಗಳ ಖಾಸಗೀಕಣ, ಜೀವವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯಲ್ಲಿ ಗಣನೀಯ ಹೆಚ್ಚಳ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಸರ್ಕಾರಿ ಬಂಡವಾಳದ ಹಿಂತೆಗೆದ ಮತ್ತು ಮಾರಾಟ ಮೊದಲಾದ ರಾಷ್ಟ್ರೀಕರಣ ವಿರೋಧಿ ಧೋರಣೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಆರ್ಥಿಕ ಸ್ಥಿತಿಯನ್ನು ಗಮನಾರ್ಹವಾಗಿ ಬದಲಾವಣೆ ಮಾಡಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಬಲಗೊಳ್ಳಬೇಕಾಗಿದೆ. ಆದರೆ ಈ ಬೇಡಿಕೆಗೆ ವಿರುದ್ಧವಾಗಿ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ಅವುಗಳ ಒಡೆತನವನ್ನು ಖಾಸಗಿ ಬಂಡವಾಳಶಾಹಿಗಳಿಗೆ ಒಪ್ಪಿಸುವ ಹುನ್ನಾರ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಸರಕಾರ ಬ್ಯಾಂಕ್ ಖಾಸಗೀಕರಣದ ನಿರ್ಧಾರದಿಂದ ಹೊರಬಂದು, ಬ್ಯಾಂಕ್ ರಾಷ್ಟ್ರೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಎನ್.ಗಿರಿರಾಜ್, ಜಿಲ್ಲಾ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಸಹ ಸಂಚಾಲಕ ಕೆ.ವಿಶ್ವನಾಥ ಬಿಲ್ಲವ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಹೆಚ್.ಜಿ.ಸುರೇಶ್, ಹೆಚ್.ಎಸ್.ತಿಪ್ಪೇಸ್ವಾಮಿ, ವಿನೋದ್ ತೋರಗಲ್, ಆರ್.ಆಂಜನೇಯ, ವಿ.ಆರ್.ಹರೀಶ್, ಕೆ.ಶಶಿಶೇಖರ್, ಎಂ.ಎಸ್.ವಾಗೀಶ್, ಎಂ.ಪಿ.ಕಿರಣಕುಮಾರ್, ಹೆಚ್.ಜಿ. ಉಮೇಶ್, ವಿ.ಎಂ.ತಿಪ್ಪೇಸ್ವಾಮಿ, ಬಿ.ಎ.ಸುರೇಶ್, ಶಶಿಕುಮಾರ್, ದುರುಗಪ್ಪ ಸಿ., ಮಂಜುನಾಥ್ ಜಿ.ವಿ., ಅನಿಲ್‌ಕುಮಾರ್, ಕಾಡಜ್ಜಿ ವೀರಪ್ಪ, ಕೆ.ರವಿಶಂಕರ್, ಅಜಯ್‌ಕುಮಾರ್, ಎಂ.ಎಂ.ಸಿದ್ದಲಿಂಗಯ್ಯ, ಜ್ಞಾನೇಶ್ವರ್, ಜಗಳೂರು ತಿಪ್ಪೇಸ್ವಾಮಿ, ರಮೇಶ್, ಶಿವಮೂರ್ತಿ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.